ಡಿಜೆ ಹಳ್ಳಿ ಗಲಭೆ ಪ್ರಕರಣ: ಪೊಲೀಸರಿಗೆ ಸಹಾಯ ಮಾಡುವ ಸಲುವಾಗಿ ನಮ್ಮನ್ನು ಸ್ಥಳಕ್ಕೆ ಕರೆಯಲಾಗಿತ್ತು- ಎನ್ಐಎಗೆ ಶಾಸಕರ ಹೇಳಿಕೆ

ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ನನ್ನನ್ನು ಕರೆದಿದ್ದು ಅಚ್ಚರಿ ಮೂಡಿಸಿದೆ. ಡಿಜೆ ಹಳ್ಳಿ ಗಲಭೆ ಸ್ಥಳಕ್ಕೆ ಭೇಟಿ ನೀಡಿದ್ದೆವು ಎಂಬ ಕಾರಣಕ್ಕೆ ಕರೆದಿದ್ದರು.
ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಹರ್ಷದ್
ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಹರ್ಷದ್

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ನನ್ನನ್ನು ಕರೆದಿದ್ದು ಅಚ್ಚರಿ ಮೂಡಿಸಿದೆ. ಡಿಜೆ ಹಳ್ಳಿ ಗಲಭೆ ಸ್ಥಳಕ್ಕೆ ಭೇಟಿ ನೀಡಿದ್ದೆವು ಎಂಬ ಕಾರಣಕ್ಕೆ ಕರೆದಿದ್ದರು. ಆದರೆ, ನಾವು ಹಿರಿಯ ಪೊಲೀಸ್ ಅಧಿಕಾರಿಗಳು ಶಾಂತಿ ಕಾಪಾಡಲು ನೆರವಾಗುವಂತೆ ಆಹ್ವಾನಿಸಿದ್ದರಿಂದ ಹೋಗಿದ್ದೆವು ಎಂದು ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಜಮೀರ್ ಅಹ್ಮದ್ ಅವರು ಎನ್ಐಎಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ರಿಜ್ವಾನ್ ಅರ್ಷದ್ ಅವರು, ಮಾಧ್ಯಮಗಳು ನಮ್ಮ ವಿರುದ್ಧ ತನಿಖೆ ನಡೆಸುತ್ತಿರುವುದಾಗಿ ಸುಳ್ಳು ವರದಿ ಮಾಡುವತ್ತಿವೆ. ವಾಸ್ತವವಾಗಿ ಘಟನಾ ಸ್ಥಳದಲ್ಲಿ ಏನಾಯಿತು ಎಂಬುದರ ಬಗ್ಗೆ ನಮ್ಮಿಂದ ಮಾಹಿತಿ ಪಡೆಯಲಷಅಟೇ ಎನ್ಐಎ ಅಧಿಕಾರಿಗಳು ಕರೆದಿದ್ದರು. ಈ ಬಗ್ಗೆ ಎಲ್ಲಾ ಮಾಹಿತಿಯನ್ನೂ ಒದಗಿಸಿದ್ದೇವೆ. ಅಂತಿಮವಾಗಿ ನಿಷ್ಪಕ್ಷಪಾತ ಹಾಗೂ ಪಕ್ಷಾತೀತವಾಗಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಒತ್ತಾಯ ಎಂದು ಹೇಳಿದ್ದಾರೆ. 

ಎನ್ಐಎ ಅಧಿಕಾರಿಗಳು ಸ್ಥಳಕ್ಕೆ ನೀವು ಭೇಟಿ ನೀಡಿದಾಗ ವಾತಾವರಣ ಹೇಗಿತ್ತು ಎಂದು ಪ್ರಶ್ನಿಸಿದರು. ಅದನ್ನು ಹೇಳಿದರೆ ತಮ್ಮ ತನಿಖೆಗೆ ಅನುಕೂಲವಾಗಲಿದೆ. ಹೀಗಾಗಿ ನಮಗೆ ಗೊತ್ತಿರುವ ಮಾಹಿತಿಯನ್ನು ನಾನು ಹಾಗೂ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದೇವೆ. ಇದನ್ನು ಹೊರತುಪಡಿಸಿ ಬೇರೇನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು. 

ಎನ್ಐಎ ನಮ್ಮನ್ನು ಕರೆದಿರುವುದಕ್ಕೆ ಅಚ್ಚರಿಯಾಗಿದೆ. ಏಕೆಂದರೆ, ಘಟನೆಯ ಸಂದರ್ಭದಲ್ಲಿ ನಾವು ಅಲ್ಲಿಗೆ ಹೋಗಿರಲಿಲ್ಲ. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಕರೆದಿದ್ದರಿಂದ ಹೋದೆವು. ಇಲ್ಲದಿದ್ದರೆ ನಾವು ಹೋಗುತ್ತಲೇ ಇರಲಿಲ್ಲ. ಈ ಬಗ್ಗೆ ಎಲ್ಲವನ್ನೂ ತಿಳಿಸಿದ್ದೇವೆ. ತನಿಖೆ ನಡೆಯುತ್ತಿರುವ ಹಂತದಲ್ಲಿ ಏನೂ ಹೇಳಲು ಆಗುವುದಿಲ್ಲ. ತನಿಖೆ ಎಲ್ಲಿಗೆ ಹೋಗುತ್ತದೆ ಎಂಬುದನ್ನು ನೋಡಬೇಕು. ಒಟ್ಟಿನಲ್ಲಿ ಸೂಕ್ತ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ನಿರಪರಾಧಿಗಳನ್ನು ಬಿಡಬೇಕೆಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com