ಪ್ರವಾಹ ಪೀಡಿತ ತಾಲೂಕುಗಳಿಗೆ ಸಚಿವ ಆರ್.ಅಶೋಕ್ ಭೇಟಿ: ರಾಷ್ಟ್ರೀಯ ವಿಪತ್ತಿನಡಿ ಹೆಚ್ಚಿನ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವರ್ಷ ವಾಡಿಕೆಗಿಂತ 5-6 ಪಟ್ಟು ಹೆಚ್ಚು ಮಳೆಯಾಗಿದ್ದು, ಕಲಬುರಗಿಯಲ್ಲಿ 30 ವರ್ಷಗಳ ಬಳಿಕ ಇಷ್ಟು ದೊಡ್ಡ ಪ್ರವಾಹ ಬಂದಿದೆ.
ಆರ್. ಅಶೋಕ್
ಆರ್. ಅಶೋಕ್

ಕಲಬುರಗಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವರ್ಷ ವಾಡಿಕೆಗಿಂತ 5-6 ಪಟ್ಟು ಹೆಚ್ಚು ಮಳೆಯಾಗಿದ್ದು, ಕಲಬುರಗಿಯಲ್ಲಿ 30 ವರ್ಷಗಳ ಬಳಿಕ ಇಷ್ಟು ದೊಡ್ಡ ಪ್ರವಾಹ ಬಂದಿದೆ. ಒಟ್ಟಾರೆ ರಾಜ್ಯದಲ್ಲಿ 3.31 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 32976 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 38626 ಹೆಕ್ಟೇರ್ ಪ್ಲ್ಯಾಂಟೇಷನ್ ಬೆಳೆ ನಾಶವಾಗಿದ್ದು, 1268 ಸೇತುವೆ, 10978 ಮನೆಗಳಿಗೂ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. 

ಶುಕ್ರವಾರ ನೆರೆ ಪೀಡಿತ ಯಾದಗಿರಿಯ ರೋಜಾ, ಉರಸಗುಂಡಗಿ ಮತ್ತು ಕಲಬುರಗಿಯ ಸಯ್ಯದ್ ಚಿಂಚೋಳಿ, ಕಟ್ಟಿ ಸಂಗಾವಿಗೆ ತೆಪ್ಪದಲ್ಲೇ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು. 

ಶುಕ್ರವಾರ ನೆರೆ ಪೀಡಿತ ಸೈಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗ್ರಾಮ ಸ್ಥಳಾಂತರ ಸಂಬಂಧ ಗ್ರಾಮಕ್ಕೆ ಹತ್ತಿರದಲ್ಲಿಯೇ 11 ಎಕರೆ ಪ್ರದೇಶ ಗುರುತಿಸಲಾಗಿದೆ. ಗ್ರಾಮಸ್ಥರು ಒಪ್ಪಿದಲ್ಲಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಅಯುಕ್ತ ರಾಮಚಂದ್ರ ಗಡಾದೆ ಅವರಿಗೆ ಸಚಿವ ಆರ್. ಅಶೋಕ ಸೂಚಿಸಿದರು.

ಇದೇ ವೇಳೆ ಭೀಮಾ ನದಿಯಿಂದ ಪ್ರವಾಹಕ್ಕೊಳಗಾದ ಜೇವರ್ಗಿ ತಾಲೂಕಿನ ಫಿರೋಜಾಬಾದ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರಿಗೆ ಗುಣಮಟ್ಟದ ಆಹಾರ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಳಜಿ ಕೇಂದ್ರದಲ್ಲಿ ಅಡುಗೆ ತಯಾರಿ ಕಾರ್ಯವನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಸಂತ್ರಸ್ತರಿಗೆ ಅನ್ನ, ಸಾಂಬಾರ್ ನೀಡಿದರೆ ಸಾಲದು. ಜೊತೆಗೆ ಮೊಟ್ಟೆ, ಪಲ್ಯಾ ಸೇರಿದಂತೆ ಗುಣಮಟ್ಟದ ಆಹಾರ ಪೂರೈಸಬೇಕು. ಕೋವಿಡ್-19 ಸಂದರ್ಭ ಇದಾಗಿರುವುದರಿಂದ ಸಂತ್ರಸ್ತರಿಗೆ ಸ್ಯಾನಿಟೈಸ್ ನೀಡುವುದಲ್ಲದೆ ಎಲ್ಲೆಡೆ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.

ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಅಧಿಕಾರಿ-ಸಿಬ್ಬಂದಿಗಳು 24 ಗಂಟೆ ಕಾರ್ಯನಿರ್ವಹಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ. ಪ್ರವಾಹ ಸಂದರ್ಭದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಕೂಡಿ ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಾಧಿಕಾರಿ ಶ್ರೀಮಂತ ಅವರನ್ನು ತಕ್ಷನದಿಂದಲೆ ಜಾರಿಗೆ ಬರುವಂತೆ ಅಮಾನತ್ತುಗೊಳಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ ಸಿದ್ದರಾಯ ಭೋಸಗಿ ಅವರಿಗೆ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com