ಸಿಎಂ ಯಡಿಯೂರಪ್ಪ ನೆರವಿನಿಂದ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ 586 ಅಂಕ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರ ಸಹಾಯದಿಂದ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ 720 ಕ್ಕೆ 586 ಅಂಕ ಗಳಿಸಿದ್ದಾರೆ.
ತನುಜಾ
ತನುಜಾ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರ ಸಹಾಯದಿಂದ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ 720 ಕ್ಕೆ 586 ಅಂಕ ಗಳಿಸಿದ್ದಾರೆ.

ಶಿವಮೊಗ್ಗದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನುಜಾ ರೈತ ನಾಗರಾಜ ಎಂಬುವರ ಪುತ್ರಿ, ತನುಜಾ ಮನೆ ಕಂಟೈನ್ ಮೆಂಟ್ ಜೋನ್ ನಲ್ಲಿದ್ದು, ಆಕೆಗೆ ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು.

ಸರ್ಜನ್ ಆಗಬೇಕೆಂದು ಬಯಸಿದ್ದ  ತನುಜಾ ಕಳೆದ ಸೆಪ್ಟೆಂಬರ್.13 ರಂದು ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನೀಟ್ ಪರೀಕ್ಷೆಗಳನ್ನು ಏರ್ಪಡಿಸಿತ್ತು. ಈ ವೇಳೆ ವಿದ್ಯಾರ್ಥಿನಿ ತನುಜಾ ನಿವಾಸವಿರುವ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಿರಲಿಲ್ಲ. ಅಲ್ಲದೇ ಅಂದು ತನುಜಾರಲ್ಲಿ ಸ್ವಲ್ಪ ಜ್ವರ ಕಾಣಿಸಿಕೊಂಡ ಹಿನ್ನೆಲೆ ನೀಟ್ ಪರೀಕ್ಷೆ ಬರೆಯಬೇಕೆಂಬ ಕನಸು ಈಡೇರಿರಲಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದ ನಂತರ ಎನ್‍ಟಿಎ ಮತ್ತೊಮ್ಮೆ ಪರೀಕ್ಷೆ ಏರ್ಪಡಿಸಿದ್ದು, ಈ ಬಾರಿ ಪರೀಕ್ಷೆ ಬರೆಯಲು ಕೊವಿಡ್-19 ಸಂಬಂಧಿತ ವರದಿ ಹಾಗೂ ದಾಖಲೆಗಳನ್ನು ಇ-ಮೇಲ್ ಮೂಲಕ ಕಳುಹಿಸುವಂತೆ ಎನ್‍ಟಿಎ ಸೂಚಿಸಿತ್ತು. 

ಎನ್ ಟಿಎ ನೀಡಿದ ಅವಕಾಶದಿಂದ ಮತ್ತೆ ಸಂತಸಗೊಂಡ ತನುಜಾರಿಗೆ ದಾಖಲೆಗಳನ್ನು ಇ-ಮೇಲ್ ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಹಳ್ಳಿಯಲ್ಲಿನ ನೆಟ್ ವರ್ಕ್ ಸಮಸ್ಯೆ,ಕೊವಿಡ್ ವರದಿಗೆ ಸಂಬಂಧಿಸಿದ ದಾಖಲೆ ರವಾನಿಸುವುದಕ್ಕೆ ಕಳುಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಪರೀಕ್ಷೆ ಬರೆಯಲಿದ್ದ ಮತ್ತೊಂದು ಅವಕಾಶವೂ ತಪ್ಪಿತ್ತು.

ಪರೀಕ್ಷೆಗಾಗಿ ದಾಖಲೆಗಳನ್ನು ರವಾನಿಸುವಲ್ಲಿ ತಮಗಾದ ಸಮಸ್ಯೆ ಬಗ್ಗೆ ವಿದ್ಯಾರ್ಥಿನಿ ತನುಜಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದನ್ನು ಗಮನಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ.ಸುಧಾಕರ್ ಮಧ್ಯಪ್ರವೇಶಿಸಿ ನೆರವು ನೀಡಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎನ್ ಟಿಎ ತಾಂತ್ರಿಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಮೂಲಕ ವಿದ್ಯಾರ್ಥಿನಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದರು. ಪರೀಕ್ಷೆ ಬರೆದಿದ್ದ ತನುಜಾ 586 ಅಂಕಗಳನ್ನು ಗಳಿಸಿ ಅರ್ಹರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com