ಶುರುವಾಯ್ತು ಹಬ್ಬದ ಸೀಸನ್: ಗಗನಕ್ಕೇರಿದ ಹೂವಿನ ಬೆಲೆ, ಗ್ರಾಹಕರು ಕಂಗಾಲು

ಹಬ್ಬದ ಸೀಸನ್ ಆರಂಭವಾಗಿದ್ದು, ನವರಾತ್ರಿಯ ಮೊದಲ ದಿನದಿಂದಲೇ ಪೂಜೆ ಹಾಗೂ ಅಲಂಕಾರಕ್ಕೆ ಅತ್ಯಗತ್ಯವಿರುವ ಹೂವಿನ ಬೆಲೆಗಳು ಗಗನಕ್ಕೇರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಬ್ಬದ ಸೀಸನ್ ಆರಂಭವಾಗಿದ್ದು, ನವರಾತ್ರಿಯ ಮೊದಲ ದಿನದಿಂದಲೇ ಪೂಜೆ ಹಾಗೂ ಅಲಂಕಾರಕ್ಕೆ ಅತ್ಯಗತ್ಯವಿರುವ ಹೂವಿನ ಬೆಲೆಗಳು ಗಗನಕ್ಕೇರಿದೆ. 

ಮೈಸೂರು ಮಲ್ಲಿಗೆ ಸೇರಿದಂತೆ ಇತರೆ ಹೂವಿನ ಬೆಲೆಗಳು ಮೊದಲಿದ್ದ ಬೆಲೆಗಿಂತಲೂ 4-5 ಬಾರಿಯಷ್ಟು ಏರಿಕೆ ಕಂಡಿದೆ. ಹೂವಿನ ಬೆಲೆ ಏರಿಕೆಯೂ ಕೇವಲ ಗ್ರಾಹಕರಷ್ಟೇ ಅಲ್ಲದೆ, ಮಾರಾಟಗಾರರ ನಿದ್ದೆಯನ್ನೂ ಕೆಡುವಂತೆ ಮಾಡಿದೆ. 

ಈ ವರೆಗೂ ಕೆಜಿಗೆ ರೂ.250 ಇದ್ದ ಮಲ್ಲಿಗೆ ಇದೀಗ ರೂ.1,500ಕ್ಕೆ ಏರಿಕೆಯಾಗಿದೆ. ಇನ್ನು ರೂ.200 ಇದ್ದ ಕನಕಾಂಬರ ಬೆಲೆ ರೂ.800ಕ್ಕೆ ಏರಿಕೆಯಾಗಿದೆ. ಕೆಜಿ ರೂ.20 ಇದ್ದ ಗುಲಾಬಿ ಬೆಲೆ ರೂ.240ಕ್ಕೆ ತಲುಪಿದೆ. ಈ ಬೆಲೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂದರ್ಭದಷ್ಟರಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಆಯುಧಪೂಜೆಗೆ ಮಾರಿಗೋಲ್ಡ್ ಹೂವಿಗೆ ಬೇಡಿಕೆಗಳು ಹೆಚ್ಚಾಗಲಿದ್ದು, ಈ ಹೂವನ್ನು ಪಾಂಡವಪುರ, ಕೆಆರ್.ಪೇಟೆ, ನಾಗಮಂಗಲ ಮತ್ತು ಮಳವಳ್ಳಿಯಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಬೆಳೆಗಳು ನಾಶಗೊಂಡಿವೆ. ಈ ಕಾರಣದಿಂದ ಈ ಬಾರಿ ಮಾರಿಗೋಲ್ಡ್ ಹೂವಿನ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.

ಬೆಲೆ ಏರಿಕೆಯಾಗಿದ್ದರೂ ರೈತರಲ್ಲಿ ಈ ಬೆಳವಣಿಗೆ ಸಂತಸವನ್ನು ತಂದಿಲ್ಲ. ಕೊರೋನಾ ವೈರಸ್ ಪರಿಣಾಮ ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹೂವಿನ ಖರೀದಿ ಕುಸಿತ ಕಂಡ ಹಿನ್ನಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ರೂ.60 ಲಕ್ಷದಷ್ಟು ಹೂವು ನಷ್ಟವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com