ಕೋವಿಡ್-19 ಮರಣ ಪ್ರಮಾಣ ಶೇ.1ಕ್ಕಿಂತ ಕಡಿಮೆಗೆ ಇಳಿಸುವ ಗುರಿಯಿದೆ: ಸಚಿವ ಸುಧಾಕರ್

ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.1.37 ರಷ್ಟಿದ್ದು, ಇದನ್ನು ಶೇ.1 ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.1.37 ರಷ್ಟಿದ್ದು, ಇದನ್ನು ಶೇ.1 ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ. 

ವಿಧಾನ ಸೌಧದಲ್ಲಿಂದು ಕೋವಿಡ್ ನಿರ್ವಹಣೆ ಕುರಿತ ಅಧಿಕಾರಿಗಳು ಮತ್ತು ತಜ್ಞರ ಸಭೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಶೇ.73 ರಷ್ಟು ಹೆಚ್ಚಿ ಸಿದ್ದು,ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಸೆ.19 ರವರೆಗೆ ಬೆಂಗಳೂರಿನಲ್ಲಿ 13.20 ಲಕ್ಷ ಪರೀಕ್ಷೆ ಮಾಡಲಾಗಿದೆ. ಒಂದೇ ತಿಂಗಳಲ್ಲಿ 22.90 ಲಕ್ಷ ಪರೀಕ್ಷೆ ಮಾಡಲಾಗಿದೆ. ಅಂದರೆ,ಪರೀಕ್ಷಾ ಸಾಮರ್ಥ್ಯವನ್ನು ಶೇ.73 ರಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. 

ಕಳೆದ ತಿಂಗಳಿಗೆ ಹೋಲಿಸಿದರೆ,9.70 ಲಕ್ಷದಷ್ಟು ಪರೀಕ್ಷೆ ಹೆಚ್ಚಿಸಲಾಗಿದೆ. ಮುಂಬೈ, ಚೆನ್ನೈ, ಅಹಮದಾಬಾದ್, ದೆಹಲಿ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರೀಕ್ಷೆ ಅತಿ ಹೆಚ್ಚಿದೆ. ಬೇರೆ ನಗರಗಳ ಸರಾಸರಿ ಪರೀಕ್ಷಾ ಹೆಚ್ಚಳ ಪ್ರಮಾಣ ಶೇ.49 ರಷ್ಟಿದೆ ಎಂದು ತಿಳಿಸಿದ್ದಾರೆ. 

ಪರೀಕ್ಷೆ ಬೇಗನೆ ಮಾಡಿ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ.ರಾಜ್ಯ ದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.1.37 ರಷ್ಟಿದೆ. ಇದನ್ನು ಶೇ.1 ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ.1.14ರಷ್ಟಿದೆ. ಇದು ನಾವು ಹೊಂದಿರುವ ಗುರಿಗೆ ಅತಿ ಸಮೀಪದಲ್ಲೇ ಇದ್ದು, ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ಸೋಂಕಿತರ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಚಳಿಗಾಲ ಆರಂಭವಾಗಲಿದ್ದು, ಜನರು ಮತ್ತಷ್ಟು ಎಚ್ಚರದಿಂದ ಇರಬೇಕಿದೆ.  ಸೋಂಕು ಕಡಿಮೆಯಾಗಿದೆ ಎಂದು ಜನರು ಎಚ್ಚರ ತಪ್ಪುವಂತಿಲ್ಲ. ಸಾಲು ಸಾಲು ಹಬ್ಬಗಳ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ಚಳಿಗಾಲ ಬರಲಿದೆ. ಈ ವೇಳೆ ಚಳಿ ಹೆಚ್ಚಾಗಲಿದ್ದು ಚಳಿ ಹಾಗೂ ತೇವಾಂಶ ಇರುವ ಕಡೆ ಕೊರೋನಾ ಸೇರಿದಂತೆ ಯಾವುದೇ ವೈರಾಣು ಹೆಚ್ಚು ಸಕ್ರಿಯವಾಗಿರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಎಚ್ಚರ ತಪ್ಪುವಂತಿಲ್ಲ. ಕೇಂದ್ರ ಸರ್ಕಾರದ ಪ್ರಕಾರ ಜನವರಿ ಬಳಿಕ ಕೊರೋನಾ ಔಷಧ ಬರಲಿದ್ದು, ಮುಂದಿನ ಮೂರು ತಿಂಗಳು ಜೀವ ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಬಿಸಿ ನೀರು ಸೇವಿಸುವುದು, ಆವಿ ತೆಗೆದುಕೊಳ್ಳುವುದು ಸೇರಿದಂತೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಪದೇ ಪದೇ ಕೈತೊಳೆಯುವುದನ್ನು ಕಡ್ಡಾಯವಾಗಿ ಮಾಡಬೇಕೆಂದು ಕರೆ ನೀಡಿದ್ದಾರೆ. 

ಚಳಿಗಾಲದಲ್ಲಿ ಸೋಂಕಿನ ರಕ್ಷಣೆ ಪಡೆಯಲು ಆಯುಷ್ ವೈದ್ಯರು ಬಿಸಿ ನೀರಿನಿಂದ ಆವಿ ತೆಗೆದುಕೊಳ್ಳವಂತೆ ಸಲಹೆ ನೀಡಿದ್ದಾರೆ. ಇದರಿಂದ ಮೂಗು ಹಾಗೂ ಗಂಟಲಿನಲ್ಲಿರುವ ಕಫ ಹೊರಗೆ ಹೋಗುತ್ತದೆ. 50 ರಿಂದ 60 ಡಿಗ್ರಿ ಸೆಲ್ಷಿಯಸ್ ನಲ್ಲಿ ವೈರಸ್ ನಿಷ್ಕ್ರಿಯವಾಗುತ್ತದೆ. ಈ ನಿಟ್ಟಿನಲ್ಲಿ ಮೂಗಿನಿಂದ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ದೊಡ್ಡ ಆಶಾಕಿರಣ ಎಂದು ಸುಧಾಕರ್ ಅವರು ಹೇಳಿದ್ದಾರೆ. 

ಈ ವೇಳೆ ಪುದಿನ ಅಥವಾ ತುಳಸಿ ಎಲೆ ನೀರಿಗೆ ಹಾಕಿ ಕುದಿಸಿದರೆ, ಉತ್ತಮ. ಯುನಾನಿಯಲ್ಲಿ ಆರ್ಕಿಅಜೀಬ್ ಎಂಬ ಔಷಧಿಯಿದ್ದು, ಅದನ್ನು ಎರಡು ಹನಿ ನೀರಿಗೆ ಹಾಕಿಕೊಂಡು ಕೂಡ ಆವಿ ಪಡೆಯಬಹುದೆಂದು ಆಯುಷ್ ಇಲಾಖೆಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ. 

ಖಾಸಗಿ ಆಸ್ಪತ್ರೆಗಳಲ್ಲಿ ಮಧ್ಯವರ್ತಿಗಳು ಹಾಸಿಗೆಗಳನ್ನು ಬ್ಲಾಕ್ ಮಾಡುತ್ತಿರುವ ಕುರಿತು ದೂರುಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿತ ಅವರು, ಇಂತಹ ವರ್ತನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ. ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com