ಬೆಂಗಳೂರಿನಲ್ಲಿ ರಾತ್ರಿ ಬರೊಬ್ಬರಿ 66.8 ಮಿಮೀ ಮಳೆ: ಹವಾಮಾನ ಇಲಾಖೆ

ಉದ್ಯಾನ ನಗರಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬರೊಬ್ಬರಿ 66.8 ಮಿಮೀ ಮಳೆಯಾಗಿದೆ ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬರೊಬ್ಬರಿ 66.8 ಮಿಮೀ ಮಳೆಯಾಗಿದೆ ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ಮುಂದುವರೆದಿದ್ದು, ನಗರದ ವಿವಿಧೆಡೆ ಮಂಗಳವಾರ ಮಳೆ ಸುರಿಯಿತು. ಪ್ರಮುಖವಾಗಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ 6.30ಕ್ಕೆ ಶುರುವಾದ ಮಳೆ ರಾತ್ರಿ 10ರವರೆಗೂ ಸತತವಾಗಿ ಸುರಿಯಿತು. ಹವಾಮಾನ ಇಲಾಖೆ ನೀಡಿರುವ ಮಾಹಿತಿ  ಅನ್ವಯ ಮಂಗಳವಾರ ರಾತ್ರಿ 8.30ರಿಂದ ಬುಧವಾರ ಮುಂಜಾನೆ 5.30ರವರೆಗೂ ನಗರದಲ್ಲಿ ಬರೊಬ್ಬರಿ 66.8 ಮಿಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.

ಭಾರಿ ಮಳೆಯಿಂದ ಇಳಿಜಾರು ಪ್ರದೇಶಗಳಲ್ಲಿ ನೀರು ನುಗ್ಗಿತು. ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಹೆಬ್ಬಾಳ, ಗಂಗಾನಗರ, ಜಯನಗರ, ಆರ್.ಟಿ.ನಗರ, ಸಂಜಯನಗರ, ಲಕ್ಕಸಂದ್ರ, ಯಲಹಂಕ, ಕೋರಮಂಗಲ, ಚಾಮರಾಜಪೇಟೆ, ಬೊಮ್ಮನಹಳ್ಳಿ, ಜ್ಞಾನಭಾರತಿ, ಹಂಪಿನಗರ, ವಿವಿ  ಪುರ, ಬಸವೇಶ್ವರ ನಗರ, ದೊಡ್ಡಜಾಲ, ವಿದ್ಯಾರಣ್ಯಪುರ, ಯಶವಂತಪುರ, ಶಾಂತಿನಗರ, ಮಲ್ಲೇಶ್ವರ, ಸಂಪಂಗಿರಾಮನಗರ ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗಿರುವುದು ವರದಿಯಾಗಿದೆ.

ಇಲಾಖೆ ನೀಡಿರುವ ಮಾಹಿತಿಯಂತೆ ಬೆಂಗಳೂರು ನಗರ ಪ್ರದೇಶದಲ್ಲಿ ನಿನ್ನೆ 67.0 ಮಿಲಿಮೀಟರ್ ಮಳೆಯಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ 43.3 ಮಿಮೀ, ಎಚ್‌ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶ 49.2 ಮಿಮೀ, ಎಲೆಕ್ಟ್ರಾನಿಕ್  ಸಿಟಿಯಲ್ಲಿ 79.0ಮಿಮೀ ಮಳೆಯಾಗಿದೆ ಎಂದು ಹೇಳಿದೆ. 

ಅಂತೆಯೇ ಇಂದೂ ಕೂಡ ಬೆಂಗಳೂರಿನಾದ್ಯಂತ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com