'ಕೈ' ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಬಿಜೆಪಿ ಬೆಂಬಲಿಗರಿಂದ ಹಲ್ಲೆ: ಪೊಲೀಸ್ ಠಾಣೆ ಬಳಿ ಪ್ರತಿಭಟನೆ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಕುಸುಮ ಪರ ಲಕ್ಷ್ಮೀದೇವಿನಗರ ಬೂತ್ 156 ಬಳಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ಜವರೇಗೌಡ, ಕಾರ್ಯಕರ್ತರಾದ ಚಿಕ್ಕರಾಜು, ರಾಕೇಶ್, ವಿನೋದ್, ರೂಪೇಶ್, ಮಾಲಿಕ್ ಮತ್ತು ಇತರ ಮುಖಂಡರ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಗ ವೇಲು ನಾಯ್ಕರ್ ಮತ್ತು ಗೂಂಡಾಗಳು ಹಲ್ಲೆ ನಡೆಸಿದ್ದಾರೆ.
ಪೊಲೀಸ್ ಠಾಣೆ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಪೊಲೀಸ್ ಠಾಣೆ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಕುಸುಮ ಪರ ಲಕ್ಷ್ಮೀದೇವಿನಗರ ಬೂತ್ 156 ಬಳಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ಜವರೇಗೌಡ, ಕಾರ್ಯಕರ್ತರಾದ ಚಿಕ್ಕರಾಜು, ರಾಕೇಶ್, ವಿನೋದ್, ರೂಪೇಶ್, ಮಾಲಿಕ್ ಮತ್ತು ಇತರ ಮುಖಂಡರ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನಂ ನಾಯ್ಡು ಬೆಂಬಲಿಗ ವೇಲು ನಾಯ್ಕರ್ ಮತ್ತು 30ಕ್ಕೂ ಹೆಚ್ಚು ಗೂಂಡಾಗಳು ಹಲ್ಲೆ ನಡೆಸಿದ್ದಾರೆ.

ಬೂತ್ ಮಟ್ಟದಲ್ಲಿ ಮತದಾರರಿಗೆ ಗುರುತಿನ ಚೀಟಿ ವಿತರಣೆ ನಡೆಸಲು ಸಂಗ್ರಹಿಸಿದ್ದ ಮಾಹಿತಿಯ ಪುಸ್ತಕ ಕಿತ್ತು ಹರಿದು ಹಾಕಿದ್ದಾರೆ. ಅಲ್ಲದೆ ಮಾಜಿ ಸಂಸದರಾದ ನಾರಾಯಣ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರಚಾರಕ್ಕೂ ವೇಲು ನಾಯ್ಕರ್ ಮತ್ತು ಸಹಚರರು ಬೆದರಿಕೆ ಹಾಕಿ ಅಡ್ಡಿಯುಂಟು ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಖಂಡಿಸಿ ಹಾಗೂ ವೇಲು ನಾಯ್ಕರ್ ಗಡಿಪಾರು ಮಾಡುವಂತೆ ಒತ್ತಾಯಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ನಾಯಕರ ಪ್ರತಿಭಟನೆ ನಡೆಸಿದ್ದಾರೆ.

ಹಿರಿಯ ನಾಯಕರಾದ ಹೆಚ್.ಎಂ.ರೇವಣ್ಣ, ಮಾಜಿ ಸಂಸದ ಧೃವ ನಾರಾಯಣ್, ಮಾಜಿ ಶಾಸಕ ಬಾಲರಾಜ್, ಮಾಜಿ ಬಿಬಿಎಂಪಿ ಸದಸ್ಯ ಶಿವರಾಜ್, ಕಾಂಗ್ರೆಸ್ ಮುಖಂಡ ಆರಾಧ್ಯ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್,ಕಾನೂನು ವಿಭಾಗದ ಸೂರ್ಯ ಮುಕುಂದರಾಜ್, ಚೇತನ್ ಶಂಕರಪ್ಪ ಮತ್ತು ನೂರಾರು ಕಾರ್ಯ ಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಪೊಲೀಸ್ ಠಾಣೆಗೆ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ ವೇಲು ನಾಯ್ಕರ್ ಮತ್ತು ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ. ಉಪ ಚುನಾವಣೆಯಲ್ಲಿ ಮತದಾರ ಗುರುತಿನ ಚೀಟಿಯನ್ನು ಮುನಿರತ್ನ ಬೆಂಬಲಿಗರು ಸಂಗ್ರಹಿಸುತ್ತಿದ್ದಾರೆ. ಆಮೂಲಕ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಬೆದರಿಕೆ ಒಡ್ಡಿದ್ದಾರೆ. ಉಪ ಚುನಾವಣೆಯಲ್ಲಿ ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಬಿಜೆಪಿ ಅಭ್ಯರ್ಥಿ ಅಡ್ಡಿಯುಂಟು ಮಾಡುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಮನೆಮನೆಗೆ ತೆರಳಿ ಮತ ಪ್ರಚಾರ ನಡೆಸದೆ ಕ್ಷೇತ್ರದ ಮತದಾ ರರ ಜಾತಿ,ಮತಗಳ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಕ್ಷೇತ್ರದಲ್ಲಿ ಜಾತಿ ರಾಜಕೀಯದ ಮೂಲಕ ಮತಗಳನ್ನು ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಬೆಂಬಲಿಗರು ಆರೋಪಿಸಿದ್ದಾರೆ.

ಯಾರು ಬೆಂಬಲಿಗರು, ಗೂಂಡಾಗಳನ್ನು ಬಳಸಿಕೊಂಡು ಚುನಾವಣೆ ನಡೆಸುವುದು ಬೇಡ. ಚುನಾವಣಾ ಆಯೋಗ ಮತದಾರರಿಗೆ ಗುರುತಿನ ಚೀಟಿ ಮತ್ತು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಿದೆ. ಯಾರೂ ಮತದಾರರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಪೊಲೀಸರು ಎರಡೂ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com