ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ: ನವೀನ್ ಗೆ ಕೊನೆಗೂ ಜಾಮೀನು

ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಬಂಧನಕ್ಕೀಡಾಗಿದ್ದ ನವೀನ್ ಗೆ ಕೊನೆಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಬಂಧನಕ್ಕೀಡಾಗಿದ್ದ ನವೀನ್ ಗೆ ಕೊನೆಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹೌದು.. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಪಿ ನವೀನ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ.  

ನವೀನ್ ಪರ ವಕೀಲರು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯನ್ನು 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಆದ್ದರಿಂದ, ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು. ನವೀನ್ ಪರವಾಗಿ ಇರುವ ಸಾಕ್ಷ್ಯಗಳು ಡಿಜಿಟಲ್ ರೂಪದಲ್ಲಿವೆ. ಅವುಗಳನ್ನು ನಾಶಪಡಿಸುವ ಸಾಧ್ಯತೆ  ಇಲ್ಲ. ಆದ್ದರಿಂದ, ಜಾಮೀನು ನೀಡಬೇಕು ಎಂದು ನವೀನ್ ಪರ ವಕೀಲರು ಮನವಿ ಮಾಡಿದ್ದರು.

ಇನ್ನು ಜಾಮೀನು ನೀಡದಂತೆ ಎಸ್‌ಪಿಪಿ ವಾದ ಮಂಡಿಸಿದ್ದರು. ನವೀನ್‌ಗೆ ಜಾಮೀನು ನೀಡಿದರೆ ಆತನಿಗೆ ಪ್ರಾಣ ಬೆದರಿಕೆಯಿದೆ. ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆಂದು ಎಸ್‌ಪಿಪಿ ವಾದ ಮಂಡಿಸಿದರು. ಆದರೆ ಈ ಕಾರಣಕ್ಕೆ ಜಾಮೀನು ನಿರಾಕರಿಸಲು ಸಾಧ್ಯವಿಲ್ಲ. ಫೇಸ್‌ಬುಕ್ ಪೋಸ್ಟ್ ಡಿಲೀಟ್  ಮಾಡಿದ್ದಾನೆ. ಕಠಿಣ ಷರತ್ತು ವಿಧಿಸಿ ಜಾಮೀನು ನೀಡಲಾಗುವುದು. ಮತ್ತೆ ಇಂಥ ಕೃತ್ಯದಲ್ಲಿ ತೊಡಗಿದರೆ ಜಾಮೀನು ರದ್ದುಪಡಿಸಬಹುದು ಎಂದು ನ್ಯಾ. ಬಿ.ಎ. ಪಾಟೀಲ್‌ ಅವರ ಏಕ ಸದಸ್ಯ ಪೀಠ ಆದೇಶ ನೀಡಿದೆ. 

ಆಗಸ್ಟ್ 11ರಂದು ರಾತ್ರಿ ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಡೆದಿತ್ತು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು. ಗಲಭೆಗೆ ಸಂಬಂಧಿಸಿದಂತೆ 400ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ನವೀನ್ ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ  ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ. ನವೀನ್ ಒಂದು ಸಮುದಾಯದ ವಿರುದ್ಧ ಫೇಸ್‌ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com