ಕೋವಿಡ್-19: ಸೋಂಕಿನಿಂದ ಗುಣಮುಖರಾದ ಶೇ.50ರಷ್ಟು ಮಂದಿಯಲ್ಲಿ ಆರೋಗ್ಯ ಸಮಸ್ಯೆ!

ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಶೇ.50ರಷ್ಟು ಜನರಲ್ಲಿ ಮತ್ತೆ ಆರೋಗ್ಯ ಸಮಸ್ಯೆಗಳು ಎದುರಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಶೇ.50ರಷ್ಟು ಜನರಲ್ಲಿ ಮತ್ತೆ ಆರೋಗ್ಯ ಸಮಸ್ಯೆಗಳು ಎದುರಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೊರೋನಾ ಸೋಂಕಿನಿಂದ ಗುಣಮುಖರಾದ ಜನರಲ್ಲಿ ಎದೆ ನೋವು, ಹೃದಯ ಸಂಬಂಧಿತ ಸಮಸ್ಯೆಗಳು, ಕೀಲು ನೋವು, ದೃಷ್ಟಿ ದೋಷ, ಮರೆಗುಳಿತನದಂತಹ ಸಮಸ್ಯೆಗಳು ಕಾಡುತ್ತಿವೆ ಎಂದು ಅಪೊಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರದ ಹಿರಿಯ ಸಲಹೆಗಾರ ಡಾ.ರವೀಂದ್ರ ಮೆಹ್ತಾ ಅವರು ಹೇಳಿದ್ದಾರೆ. 

ಕೊರೋನಾದಿಂದ ಚೇತರಿಸಿಕೊಂಡವರಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಈಗಾಗಲೇ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ರಾಮಯ್ಯ ಆಸ್ಪತ್ರೆಗಳು ಕ್ಲಿನಿಕ್ ಗಳನ್ನು ತೆರೆದಿವೆ. 

ಕೊರೋನಾ ಸೋಂಕಿಗೊಳಗಾದ ವ್ಯಕ್ತಿ ಗುಣಮುಖರಾದರೂ ಕೂಡ ದೇಹದಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವುದು, ಹೃದಯ ಸ್ನಾಯುವಿನ ಉರಿಯೂತ, ಆಯಾಸ, ಮನಸ್ಥಿತಿ ಬದಲಾವಣೆಗಳು, ತಲೆನೋವು ಮತ್ತು ದೇಹದಲ್ಲಿ ನೋವುಗಳು ಕಾಣಿಸಿಕೊಳ್ಳುತ್ತವೆ ಎಂದು ಡಾ.ಮೆಹ್ತಾ ಹೇಳಿದ್ದಾರೆ. 

ಕೊರೋನಾ ವೈರಸ್ ಕೇವಲ ಮನುಷ್ಯನ ದೇಹದ ಮೇಲಷ್ಟೇ ಅಲ್ಲ. ದೇಹದ ಇತರೆ ಅಂಗಾಂಗಗಳ ಮೇಲೂ ಪರಿಣಾಮ ಬೀರುತ್ತವೆ. ಕೆಲ ವ್ಯಕ್ತಿಗಳಲ್ಲಿ ಗುಣಮುಖರಾದಾ ವಾರಗಳು ಅಥವಾ ತಿಂಗಳುಗಳ ಬಳಿಕ ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಈ ಸಮಸ್ಯೆಗಳು ದೀರ್ಘಕಾಲಿಕವಾಗಿಯೂ ಕಾಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. 

ಕೊರೋನಾದಿಂದ ಚೇತರಿಸಿಕೊಂಡ ಬಹುತೇಕ ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬಂದಿದ್ದು, ಕೆಲವರು ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದೂ ಕೂಡ ವರದಿಯಾಗಿವೆ. ಜಯನಗರದಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಜೂನ್ 23 ರಿಂದ ಇಲ್ಲಿಯವರೆಗೂ 1,400 ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ 480 ಮಂದಿ ಐಸಿಯುಲ್ಲಿದ್ದು, ಮರಣ ಪ್ರಮಾಣ ಶೇ.7.8 ರಿಂದ 8.5ರ ನಡುವೆ ಇದೆ. 

ಬನ್ನೇರುಘಟ್ಟ ಶಾಖೆಯ ಆಸ್ಪತ್ರೆಯಲ್ಲಿ 1,450 ಸೋಂಕಿತರಿದ್ದು, ಅವರಲ್ಲಿ ಈಗಾಗಲೇ 600 ಮಂದಿಯನ್ನು ಐಸಿಯವಿನಿಂದ ಬಿಡುಗಡೆ ಮಾಡಲಾಗಿದ್ದು, 60 ಮಂದಿ ಸಾವನ್ನಪ್ಪಿದ್ದಾರೆ. 

ಸೋಂಕಿನಿಂದ ಚೇತರಿಸಿಕೊಂಡ ಜನರಲ್ಲಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಹೆಚ್ಚಿನ ಸಂಶೋಧನೆಗಾಗಿ ಆಸ್ಪತ್ರೆಯು ಇದೀಗ 25 ಪ್ರಶ್ನೆಗಳುಳ್ಳ ಪ್ರಶ್ನಾವಳಿಯನ್ನು ಸಿದ್ಧಪಡಿಸಿ, ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com