ಕೊರೋನಾ ತಂದ ಸಂಕಷ್ಟ: ವಲಸೆ ಕಾರ್ಮಿಕರ ಓಲೈಕೆಗಾಗಿ ಕೋವಿಡ್ ವಿಮೆ ಮೊರೆ ಹೋಗುತ್ತಿರುವ ಮಾಲೀಕರು!

ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ಕೇವಲ ಕಾರ್ಮಿಕ ವಲಯ ಮಾತ್ರವಲ್ಲ...ಮಾಲೀಕ ವಲಯ ಕೂಡ ಸಂಕಷ್ಟ ಪಡುವಂತಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ಕೇವಲ ಕಾರ್ಮಿಕ ವಲಯ ಮಾತ್ರವಲ್ಲ...ಮಾಲೀಕ ವಲಯ ಕೂಡ ಸಂಕಷ್ಟ ಪಡುವಂತಾಗಿದೆ.

ಹೌದು..ಕೊರೋನಾ ಸಾಂಕ್ರಾಮಿಕದ ಬೆನ್ನಲ್ಲೇ ದೇಶದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಇದರ ನಡುವೆಯೇ ಉತ್ಪಾದನಾ ವಲಯಕ್ಕೆ ಕಾರ್ಮಿಕರ ತೀವ್ರ ಕೊರತೆ ಕಾಡುತ್ತಿದೆ. ಪ್ರಮುಖವಾಗಿ ಮೈಸೂರಿನ ಕೈಗಾರಿಕಾ ವಲಯ ಕಾರ್ಮಿಕರ ಕೊರತೆಯಿಂದಾಗಿ ಚಿಂತಾಕ್ರಾಂತವಾಗಿದ್ದು, ಕಾರ್ಮಿಕರನ್ನು ಕರೆತರಲು ಮಾಲೀಕ ವಲಯ ಏನು ಬೇಕಾದರೂ ಮಾಡಲು ಸಿದ್ಧವಾಗಿವೆ. ಇದೇ ಕಾರಣಕ್ಕೆ ಕೈಗಾರಿಕೆಗಳ ಮಾಲೀಕರು ಕೊರೋನಾ ವಿಮೆಯತ್ತ ಮುಖ ಮಾಡಿದ್ದಾರೆ.

ಕೊರೋನಾ ಸಾಂಕ್ರಾಮಿಕದಿಂದ ಭಯಪಟ್ಟು ತಮ್ಮ ತಮ್ಮ ತವರು ಊರುಗಳಿಗೆ ತೆರಳಿಲಿರುವ ಕಾರ್ಮಿಕರನ್ನು ಕರೆತರಲು ಕೈಗಾರಿಕೆಗಳ ಮಾಲೀಕರು ಕೊರೋನಾ ಚಿಕಿತ್ಸಾ ವಿಮೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದಲ್ಲದೆ ಕಾರ್ಮಿಕರಿಗೆ ಉತ್ತಮ ಮೂಲಭೂತ ಸೌಕರ್ಯ, ವಸತಿ, ಉತ್ತಮ ವೇತನ ನೀಡುವ ಕುರಿತು ನಿರ್ಧರಿಸುತ್ತಿದ್ದಾರೆ. ಈ ಹಿಂದೆ ಕಾನೂನುಗಳ ಹೊರತಾಗಿಯೂ ಕಾರ್ಮಿಕರಿಗೆ ಇಎಸ್‌ಐ ವ್ಯಾಪ್ತಿಯನ್ನು ಸಹ ನಿರಾಕರಿಸಲಾಗಿತ್ತು. ಸ್ಥಳೀಯ ಕಾರ್ಮಿಕರನ್ನು ಸೆಳೆಯುವ ಪ್ರಯತ್ನಗಳೂ ಕೂಡ ಆಗುತ್ತಿದೆಯಾದರೂ ಅವರಿಂದ ಸೂಕ್ತ ರೀತಿಯ ಸಹಕಾರ ಸಿಗುತ್ತಿಲ್ಲ ಎಂಬ ಮಾತುಗಳೂ ಕೂಡ ಇವೆ. 

ಈ ಬಗ್ಗೆ ಮಾತನಾಡಿರುವ ಮೈಸೂರಿನ ಪಾತ್ರೆಗಳ ಕಾರ್ಖಾನೆ ಹೊಂದಿರುವ ರಘು ಅವರು, ಕಾರ್ಮಿಕರಿಲ್ಲದೆ ಕಷ್ಟಪಡುತ್ತಿದ್ದೇವೆ. ಹಿಂದಿನ ಉದ್ಯೋಗಿಗಳು ಹೆಚ್ಚಾಗಿ ಒಡಿಶಾ ಮತ್ತು ಬಿಹಾರ ಮೂಲದವರಾಗಿದ್ದರು. ಕೊರೋನಾ ಸಾಂಕ್ರಾಮಿಕದಿಂದಾಗಿ ಅವರು ತವರಿಗೆ ಹಿಂದುರಿಗಿದ್ದರು. ಇದೀಗ ಅವರು ಕೋವಿಡ್-19 ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸದ ಹೊರತು ಹಿಂದಿರುಗಲು ಒಪ್ಪುತ್ತಿಲ್ಲ ಎಂದು ಹೇಳಿದರು. ಇದೀಗ ಒಡಿಶಾ ಮತ್ತು ಬಿಹಾರದ 27 ಉದ್ಯೋಗಿಗಳನ್ನು ಮರಳಿ ಕರೆತರಲು ವಿಮಾನವನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ. ಕಾರ್ಮಿಕರ ಪ್ರಯಾಣಕ್ಕೂ ಮೊದಲು ಅವರ ಆರೋಗ್ಯವಿಮೆ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.

“ನನ್ನ ಕಾರ್ಖಾನೆಯಲ್ಲಿ ಈ ಮೊದಲು 80 ಕ್ಕೂ ಹೆಚ್ಚು ಉದ್ಯೋಗಿಗಳಿದ್ದರು. ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರು ತವರಿಗೆ ಮರಳಿದ ಬಳಿಕ ಕಾರ್ಖಾನೆ ಕಾರ್ಮಿಕರಿಲ್ಲದೇ ಸಂಕಷ್ಟಕ್ಕೀಡಾಗುವಂತಾಗಿದೆ. ನಾನು ಕೂಡ ಸಾಲ ಮಾಡಿ ಕಾರ್ಖಾನೆ ನಡೆಸುತ್ತಿದ್ದು, ಕಾರ್ಮಿಕರಿಲ್ಲದೇ ಉತ್ಪಾದನಾ ಪ್ರಮಾಣ ಕುಸಿತವಾಗಿದೆ. ಕಾರ್ಮಿಕರ ಕುಟುಂಬಗಳು ಕೋವಿಡ್-19 ಬಗ್ಗೆ ಚಿಂತಿತರಾಗಿದ್ದು, ನಾನು ಅವರಿಗೆ 2 ಲಕ್ಷ ರೂ.ಗಳ ವಿಮಾ ರಕ್ಷಣೆ ಒದಗಿಸಬೇಕಿದೆ. ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಭರವಸೆ ನೀಡಲಾಗಿದೆ. ನನ್ನ ಕುಟುಂಬಕ್ಕೇ ಕೋವಿಡ್-19 ವಿಮೆ ಇಲ್ಲ, ಆದರೆ ನಾನು ಕಾರ್ಮಿಕರ ಕುಟುಂಬಕ್ಕೆ ವಿಮೆ ಮಾಡಿಸಬೇಕಿದೆ ಎಂದು ಹೇಳಿದರು.

ಮತ್ತೋರ್ವ ಉದ್ಯಮಿ ಹರಿ ಎಂಬುವವರು ಇತ್ತೀಚೆಗೆ ಬಿಹಾರದಿಂದ ವಿಮಾನದಲ್ಲಿ ಐದು ಕಾರ್ಮಿಕರನ್ನು ಕರೆ ತಂದಿದ್ದಾಗಿ ಹೇಳಿದ್ದಾರೆ. ಮೊದಲು ನಾವು ಸ್ಥಳೀಯ ಕಾರ್ಮಿಕರನ್ನು ಸಂಪರ್ಕಿಸಿದೆವು. ಆದರೆ ಅವರು ಸಹಕರಿಸಲಿಲ್ಲ. ಆದ್ದರಿಂದ ನಾವು ವಲಸೆ ಕಾರ್ಮಿಕರನ್ನು ಕರೆತಂದು ಆರೋಗ್ಯ ವಿಮೆ  ಮತ್ತು ಉತ್ತಮ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿ ಕೆಲಸ ಮಾಡಿಸಬೇಕಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com