ಕಲಬುರಗಿ: ನಕಲಿ ರಕ್ಷಣಾ ಕಾರ್ಯ ನಡೆಸಿದ್ದ ಪಿಎಸ್ಐ ಅಮಾನತು
ಪ್ರವಾಹ ಸಂದರ್ಭದಲ್ಲಿ ಹಿರೋಗಳಂತೆ ಪೋಸ್ ಕೊಟ್ಟು, ನಕಲಿ ರಕ್ಷಣಾ ಕಾರ್ಯ ನಡೆಸಿದ್ದ ನೆಲೋಗಿ ಪಿಎಸ್ಐ ಮಲ್ಲಣ್ಣ ಯಲಗೋಡ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
Published: 23rd October 2020 04:45 PM | Last Updated: 23rd October 2020 04:45 PM | A+A A-

ಮಲ್ಲಣ್ಣ ಯಲಗೋಡ
ಕಲಬುರಗಿ: ಪ್ರವಾಹ ಸಂದರ್ಭದಲ್ಲಿ ಹಿರೋಗಳಂತೆ ಪೋಸ್ ಕೊಟ್ಟು, ನಕಲಿ ರಕ್ಷಣಾ ಕಾರ್ಯ ನಡೆಸಿದ್ದ ನೆಲೋಗಿ ಪಿಎಸ್ಐ ಮಲ್ಲಣ್ಣ ಯಲಗೋಡ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ನೇಲೋಗಿ ಠಾಣಾ ಪಿಎಸ್ ಐ ಮಲ್ಲಣ್ಣ ಯಲಗೋಡ ಅವರನ್ನು ಅಮಾನತು ಮಾಡಿ ಕಲಬುರಗಿ ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ಬದಲು ತಾವೇ ತೆಪ್ಪದಲ್ಲಿ ನಿಂತು ವಿಭಿನ್ನವಾಗಿ ಫೋಸ್ ನೀಡಿದಲ್ಲದೇ, ಬೇರೆ ಕಡೆಯಿಂದ ಕುರಿ ಮರಿಗಳನ್ನು ತರಿಸಿ ಅವುಗಳನ್ನು ಎತ್ತಿಹಿಡಿದು, ಭೀಮಾ ಪ್ರವಾಹದಲ್ಲಿ ಸಿಲುಕಿದ್ದ ಅವುಗಳನ್ನು ತಾವೇ ರಕ್ಷಿಸಿರುವುದಾಗಿ ಗ್ರಾಮಸ್ಥರಿಂದ ಹೇಳಿಸಿ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೋವನ್ನು ಕೂಲಂಕಷವಾಗಿ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರು ಮಲ್ಲಣ್ಣ ಯಲಗೋಡ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.
ಅಲ್ಲದೇ, ಜೇವರ್ಗಿ ಪಿಎಸ್ ಐ ಸಂಗಮೇಶ ಅವರಿಗೆ, ನೆಲೋಗಿ ಪೊಲೀಸ್ ಠಾಣೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆಯೂ ಮಲ್ಲಣ್ಣ ಅವರು ಕೊರೋನಾ ಸಂದರ್ಭದಲ್ಲೂ ತಮ್ಮ ಜನ್ಮದಿನದಂದು ಬೆಂಬಲಿಗರಿಂದ ಹಾಲಿನ ಅಭಿಷೇಕ ಮಾಡಿಕೊಂಡಿದ್ದರು. ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಅವರು ಶೋಕಾಸ್ ನೋಟಿಸ್ ಜಾರಿಗೊಳಿಸಿ, ನೆಲೋಗಿಯಿಂದ ಎಸ್ಪಿ ಕಚೇರಿಗೆ ವರ್ಗಾಯಿಸಿದ್ದರು.