ಕೊರೋನಾ ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ: ಸಂದರ್ಶನದಲ್ಲಿ ಸಚಿವ ಸುಧಾಕರ್

ಕೊರೋನಾ ಸಾಂಕ್ರಾಮಿಕ ರೋಗ ನಡುವಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಖಾತೆ ಜೊತೆ ಜೊತೆಗೆ ಆರೋಗ್ಯ ಸಚಿವಾಲಯದ ಖಾತೆಯನ್ನು ವಹಿಸಿಕೊಂಡಿದ್ದ ಸಚಿವ ಸುಧಾಕರ್ ಅವರಿಗೆ ಇದೀಗ ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಕೂಡ ದೊಡ್ಡ ಸವಾಲಾಗಿ ಪರಿಣಿಸಿದೆ.
ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ನಡುವಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಖಾತೆ ಜೊತೆ ಜೊತೆಗೆ ಆರೋಗ್ಯ ಸಚಿವಾಲಯದ ಖಾತೆಯನ್ನು ವಹಿಸಿಕೊಂಡಿದ್ದ ಸಚಿವ ಸುಧಾಕರ್ ಅವರಿಗೆ ಇದೀಗ ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಕೂಡ ದೊಡ್ಡ ಸವಾಲಾಗಿ ಪರಿಣಿಸಿದೆ. 

ಕೊರೋನಾ ಸೋಂಕು ಜೊತೆಗೆ ಎದುರಾಗಿರುವ ಪ್ರವಾಹ ಪರಿಸ್ಥಿತಿಯ ಸವಾಲು ಎದುರಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. 

ರಾಜ್ಯದ ಬಹುತೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸವಾಲುಗಳನ್ನು ಹೇಗೆ ಎದುರಿಸುತ್ತೀರಿ? 
ಪ್ರವಾಹದಿಂದ ಹಾನಿಗೊಳಗಾದ ಕಲಬುರಗಿ, ಬಾಗಲಕೋಟೆ, ಕೊಪ್ಪಳ, ಯದಗಿರಿ, ಬೆಳಗಾವಿ ಮತ್ತು ವಿಜಯಪುರ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದೇನೆ. ಕೋವಿಡ್ -19, ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ಸೇರಿದಂತೆ ರೋಗಗಳ ಹರಡುವುದನ್ನು ತಡೆಯಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

ಪುನರ್ವಸತಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಆರೋಗ್ಯಕರ ಆಹಾರ, ಮಾಸ್ಕ್'ಗಳು, ಕೈ ತೊಳೆದುಕೊಳ್ಳಲು ಸೌಲಭ್ಯ, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ.  ವಯಸ್ಸಾದ ಮಹಿಳೆಯರು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು ಮತ್ತು ಇತರ ದುರ್ಬಲ ಜನರನ್ನು ಪಿಎಚ್‌ಸಿ, ಸಿಎಚ್‌ಸಿ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಇರಿಸಲಾಗುತ್ತಿದೆ. ಇಂತಹವರ ಆರೋಗ್ಯದ ಬಗ್ಗೆ ನಿಗಾ ಇಡಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಈ ಜಿಲ್ಲೆಗಳಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಇತರ ರೋಗಗಳು ನಿಯಂತ್ರಣದಲ್ಲಿವೆ.

ಹಬ್ಬಗಳ ಸೀಸನ್ ಆರಂಭವಾಗಿದ್ದು, ನಿಯಮಗಳು ಉಲ್ಲಂಘನೆಯಾಗುತ್ತಿದೆಯೇ? 
ಕೇರಳದ ಓಣಂ ಆಚರಣೆಯಿಂದ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಮೈಸೂರಿನಲ್ಲಿ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಮೈಸೂರಿಗೆ 4 ಬಾರಿ ಭೇಟಿ ನೀಡಿದ್ದೇನೆ. ರಾಜ್ಯದಲ್ಲಿ ಕೊರೋನಾ ಆರಂಭದಲ್ಲೇ ಪತ್ತೆಹಚ್ಚಲು ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಜಾಗೃತಿ ಅಭಿಯಾನಗಳು, ಮುನ್ನೆಚ್ಚರಿಕಾ ಕ್ರಮಗಳು, ಕೊರೋನಾ ವಾರಿಯರ್ಸ್ ಗಳ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಇದೀಗ ಕೊರೋನಾ ಪರಿಸ್ಥಿತಿ ಸುಧಾರಿಸುತ್ತಿದೆ. ಶುಕ್ರವಾರ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.4.94ಕ್ಕೆ ಇಳಿಕೆಯಾಗಿದ್ದರೆ, ಸಾವಿನ ಪ್ರಮಾಣ ಶೇ.0.95ಕ್ಕೆ ಇಳಿದಿದೆ. 

ಉಪಚುನಾವಣೆಯ ಪ್ರಚಾರದ ವೇಳೆ ಕೊರೋನಾ ನಿಯಮಗಳು ಉಲ್ಲಂಘಿಸಲಾಗುತ್ತಿದೆಯೇ? 
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿಲ್ಲ, ಆದರೆ ತಮ್ಮನ್ನು ಮತ್ತು ಸಾರ್ವಜನಿಕರನ್ನು ಸೋಂಕಿನ ಅಪಾಯಕ್ಕೊಳಗಾಗುವಂತೆ ಮಾಡುತ್ತಿದ್ದಾರೆ. ಪಕ್ಷಗಳು ಹಾಗೂ ಪಕ್ಷದ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳೊಂದಿಗೆ ಸಹಕಾರ ನೀಡುವುದರ ಜೊತೆ ಜೊತೆಗೆ ಸಾರ್ವಜನಿಕರ ಆರೋಗ್ಯ ಸುರಕ್ಷತೆಯಿಂದ ನಿಯಮ ಪಾಲನೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇನೆ. 

ಜನರು ಲಸಿಕೆಗಾಗಿ ಕಾಯುತ್ತಿದ್ದಾರೆ. ಲಸಿಕೆ ವಿತರಣೆಗೆ ಯಾವೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ?
ಪ್ರತಿಯೊಬ್ಬ ನಾಗರಿಕರಿಗೂ ಶೀಘ್ರಗತಿಯಲ್ಲಿ ಲಸಿಕೆ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಸರ್ಕಾರಿ ಮತ್ತು ಖಾಸಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಎಲ್ಲವೂ ಸರಿಯಾಗಿ ನಡೆದಿದ್ದೇ ಆದರೆ, ಲಸಿಕೆ ಮುಂದಿನ ವರ್ಷದ ಜನವರಿಯಲ್ಲಿಯೇ ಲಭ್ಯವಿರಲಿದೆ. ಲಸಿಕೆ ಸಿದ್ಧವಾದ ನಂತರ ಅದನ್ನು ಹೇಗೆ ಹೊರತರಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರ ಈಗಾಗಲೇ ವಿವರವಾದ ಯೋಜನೆಯನ್ನು ರೂಪಿಸುತ್ತಿದೆ. ಲಸಿಕೆಯ ಪ್ರಮಾಣ ಮತ್ತು ವ್ಯಾಪ್ತಿಯು ಚುನಾವಣಾ ಪ್ರಕ್ರಿಯೆಯಂತೆಯೇ ಇರಲಿದೆ.

ರಾಜ್ಯದಲ್ಲಿ ಆರ್'ಟಿ ಮತ್ತು ಪಿಸಿಆರ್ ಪರೀಕ್ಷೆಗಳ ಸಂಖ್ಯೆ ಇಳಿಕೆಯಾಗಿದ್ದು, ಪರೀಕ್ಷೆ ಸಂಖ್ಯೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ...
ಆರ್ಟಿ-ಪಿಸಿಆರ್ ವಿಧಾನದ ಮೂಲಕ ಒಟ್ಟು ಪರೀಕ್ಷೆಗಳಲ್ಲಿ 80% ನಷ್ಟು ನಡೆಸುವ ಗುರಿಯನ್ನು ರಾಜ್ಯವು ನಿಗದಿಪಡಿಸಿದೆ. ದಿನನಿತ್ಯದ ಆಧಾರದ ಮೇಲೆ ಕಳೆದ ಕೆಲವು ದಿನಗಳಲ್ಲಿ ಗುರಿಯನ್ನು ಪೂರೈಸಲಾಗಿದೆ. ಆರ್ಟಿ-ಪಿಸಿಆರ್ ಅನ್ನು ಹೆಚ್ಚಿಸಿದ್ದರೂ, ಆರ್'ಎಟಿನ್ನು ಪರೀಕ್ಷಿಸುವುದನ್ನು ಮುಂದುವರಿಸುತ್ತೇವೆಯ ಏಕೆಂದರೆ ಇದು ಅತ್ಯಂತ ಉಪಯುಕ್ತವಾದ ಪಾಯಿಂಟ್-ಆಫ್-ಕೇರ್ ಪರೀಕ್ಷೆಯಾಗಿದೆ, ವಿಶೇಷವಾಗಿ ಸಾರಿ ಮತ್ತು ಐಎಲ್ಐ ಪ್ರಕರಣಗಳ ಗುರುತಿಸುವಿಕೆ ಮತ್ತು ಚಿಕಿತ್ಸೆ ನೀಡಲು ಸಹಾಯಕವಾಗಿದೆ. ರಾಜ್ಯದಲ್ಲಿ ಶುಕ್ರವಾರ 1,08,356 ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರಲ್ಲಿ 86,741, ಅಂದರೆ 80% ಕ್ಕಿಂತ ಹೆಚ್ಚು ಆರ್‌ಟಿ-ಪಿಸಿಆರ್ ಪರೀಕ್ಷೆಗಳಾಗಿವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com