ಮಾಜಿ ಸಚಿವ ಡಾ. ವೈ. ನಾಗಪ್ಪ ನಿಧನ

ಮಾಜಿ ಸಚಿವ ಡಾ.ವೈ.ನಾಗಪ್ಪ ನಿಧನರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು. 
ಡಾ.ವೈ ನಾಗಪ್ಪ
ಡಾ.ವೈ ನಾಗಪ್ಪ

ದಾವಣಗೆರೆ: ಮಾಜಿ ಸಚಿವ ಡಾ.ವೈ.ನಾಗಪ್ಪ ನಿಧನರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು. 

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆಗಿದ್ದ ನಾಗಪ್ಪ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಧರಂ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ನಾಗಪ್ಪ ಅವರು ಹರಿಹರ ವಿಧಾನ ಸಭಾ ಕ್ಷೇತ್ರದಿಂದ 1989, 1999 ಹಾಗೂ 2004 ರಲ್ಲಿ ಶಾಸಕರಾಗಿ  ಆಯ್ಕೆಯಾಗಿದ್ದರು. 2004 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2008 ರಲ್ಲಿ ಮತ್ತೆ ಹರಿಹರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಡಾ. ವೈ ನಾಗಪ್ಪ ಪರಾಭವಗೊಂಡಿದ್ದರು. ನಂತರ ಬದಲಾದ ರಾಜಕೀಯದಿಂದ ಮತ್ತು ಅನಾರೋಗ್ಯದಿಂದ  ರಾಜಕಾರಣದಿಂದ ದೂರ ಉಳಿದಿದ್ದರು.

1980 ರಲ್ಲಿ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪದೇ ಪದೇ ವರ್ಗಾವಣೆ ಮಾಡಿಸಿದಾಗ ಬೇಸತ್ತು ಶಾಸಕರಿಗೆ ಸೆಡ್ಡು ಹೊಡೆದು ರಾಜಕೀಯ ಪ್ರವೇಶಿಸಿದ್ದರು. ಮೃತರು ಒಬ್ಬ ಪುತ್ರ, ಮೂವರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.  ಮೃತರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಹರಿಹರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಗಣ್ಯರ ಶೋಕ
ಮಾಜಿ ಸಚಿವ ಡಾ.ವೈ.ನಾಗಪ್ಪ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದು, ಮೂರು‌ ಬಾರಿ ಶಾಸಕರಾಗಿದ್ದ ಹಾಗೂ ಸಮಾಜ ಕಲ್ಯಾಣ ಖಾತೆಯ‌ ಮಾಜಿ ಸಚಿವರಾಗಿದ್ದ ಹೆಚ್.ನಾಗಪ್ಪ ಅವರ ನಿಧನದಿಂದ ಮನಸ್ಸಿಗೆ  ನೋವುಂಟಾಗಿದೆ. ಶ್ರೀಯುತರ ಅಗಲಿಕೆಯಿಂದ ನಮ್ಮ ನಾಡಿನ ಹಿರಿಯ ಮುಖಂಡರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಮತ್ತು ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶೋಕ ಸಂದೇಶದಲ್ಲಿ  ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಂತಾಪ ಸೂಚಿಸಿದ್ದು, ಸಮಾಜ ಕಲ್ಯಾಣ ಖಾತೆಯ ಮಾಜಿ ಸಚಿವರಾಗಿದ್ದ ಮತ್ತು 3 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಡಾ.ವೈ.ನಾಗಪ್ಪ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು  ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಸಂತಾಪ ಸೂಚಿಸಿ, ದಾವಣಗೆರೆ ಜಿಲ್ಲೆಯ ಹರಿಹರ ದಿಂದ ಮೂರು‌ ಬಾರಿ ಶಾಸಕರಾಗಿ ಹಾಗೂ ಈ ಹಿಂದೆ 2004-05 ರ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಖಾತೆಯ‌ ಸಚಿವರಾಗಿದ್ದ ಡಾ.  ವೈ.ನಾಗಪ್ಪ ಅವರ ನಿಧನದಿಂದ ಮನಸ್ಸಿಗೆ ನೋವುಂಟಾಗಿದೆ.ಶ್ರೀಯುತರ ಅಗಲಿಕೆಯಿಂದ ನಮ್ಮ ನಾಡಿನ ಹಿರಿಯ ಮುಖಂಡರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಮತ್ತು ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ನಾನು ಭಗವಂತನಲ್ಲಿ  ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com