ವಿಧಾನಪರಿಷತ್ ಸಮರ: ಕೊರೋನಾ ಆತಂಕದ ನಡುವೆ ಈ ಬಾರಿ ಮತದಾನ ಪ್ರಮಾಣ ಗಣನೀಯ ಏರಿಕೆ!

ಕೊರೋನಾ ಮಹಾಮಾರಿ ಆತಂಕದ ನಡುವಲ್ಲೂ 2014ರ ಚುನಾವಣೆಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಒಟ್ಟಾರೆ ಶೇ.70ಕ್ಕಿಂತಲೂ ಹೆಚ್ಚು ಮತದಾನವಾಗಿರುವುದು ಕಂಡು ಬಂದಿದೆ. 
ರಾಜರಾಜೇಶ್ವರಿ ನಗರದಲ್ಲಿ ಮತಹಾಕಲು ಸಾಲಿನಲ್ಲಿ ನಿಂತಿರುವ ಮತದಾರರು
ರಾಜರಾಜೇಶ್ವರಿ ನಗರದಲ್ಲಿ ಮತಹಾಕಲು ಸಾಲಿನಲ್ಲಿ ನಿಂತಿರುವ ಮತದಾರರು

ಬೆಂಗಳೂರು: ಕೊರೋನಾ ಮಹಾಮಾರಿ ಆತಂಕದ ನಡುವಲ್ಲೂ 2014ರ ಚುನಾವಣೆಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಒಟ್ಟಾರೆ ಶೇ.70ಕ್ಕಿಂತಲೂ ಹೆಚ್ಚು ಮತದಾನವಾಗಿರುವುದು ಕಂಡು ಬಂದಿದೆ. 

ವಿಧಾನಪರಿಷತ್'ನ ನಾಲ್ಕು ಸ್ಥಾನಗಳಿಗೆ ನಡೆದ ಮತದಾನದ ವೇಳೆ ಕೆಲವೆಡೆ ಗೊಂದಗಳು ಸೃಷ್ಟಿಯಾಗಿದ್ದನ್ನು ಹೊರತುಪಡಿಸಿದರೆ ಈ ಬಾರಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಆಡಳಿತಾರೂಠ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ 40 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿ ಮತಪಟ್ಟಿಗೆ ಸೇರಿದೆ. ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ. 

ಈಶಾನ್ಯ ಶಿಕ್ಷಕ ಕ್ಷೇತ್ರದಲ್ಲಿ ಶೇ.70.11ರಷ್ಟು ಮತದಾನವಾಗಿದ್ದು, ಬೆಂಗಳೂರು ಶಿಕ್ಷಕ ಕ್ಷೇತ್ರದಲ್ಲಿ ಶೇ.66.2, ಆಗ್ನೇಯ ಕ್ಷೇತ್ರದಲ್ಲಿ ಶೇ.73.324 ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶೇ.74.84ರಷ್ಟು ಮತದಾನವಾಗಿದೆ. 

ಕಳೆದ 2014ರಲ್ಲಿ ನಡೆದ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಉತ್ತಮವಾಗಿ ಮತದಾನವಾಗಿದೆ. ಕೊರೋನಾದ ಆತಂಕದ ನಡುವೆಯೂ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರಕ್ಕೆ 2014ರಲ್ಲಿ ಶೇ.49.48ರಷ್ಟು ಮತದಾನವಾದರೆ, ಈ ಬಾರಿ ಶೇ.70.11ರಷ್ಟು ಮತದಾನವಾಗಿದೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 2014ರಲ್ಲಿ ಶೇ.52.25ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.74.84ರಷ್ಟಾಗಿದೆ. ಈಶಾನ್ಯಾ ಶಿಕ್ಷಕರ ಕ್ಷೇತ್ರದಲ್ಲಿ 2014ರಲ್ಲಿ ಶೇ.60.3ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.73.32ರಷ್ಟು ಮತದಾನವಾಗಿದೆ. ಇನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶೇ.44.91ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.66.2 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 

ಈ ನಡುವೆ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಅಣ್ಣಿಗೇರಿ ಪುರಸಭೆಯ ಮತಗಟ್ಟೆ ಸಂಖ್ಯೆ 50ರಲ್ಲಿ ಇಬ್ಬರು ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. 

ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ಚಲಾಯಿಸಲು ಮೀಸಲಿಡಲಾಗಿತ್ತು. ಹೋಂ ಐಸೋಲೇಷನ್ ನಲ್ಲಿದ್ದ ಒಬ್ಬರು ಹಾಗೂ ಕೋವಿಡ್ ಕೇರ್ ಸೆಂಟರಿನಲ್ಲಿ ಇದ್ದ ಒಬ್ಬರು ಮತದಾನ ಮಾಡಿದರು. ಇವರು ಮತಗಟ್ಟೆಗೆ ಬಂದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮತದಾನದ ನಂತರ ಮಗಟ್ಟೆಯನ್ನು ಪುನಃ ಸಂಪುರ್ಣ ಸ್ಯಾನಿಟೈಸ್ ಮಾಡಲಾಯಿತು. 

ನವೆಂಬರ್ 2ಕ್ಕೆ ಮತಎಣಿಕೆ
ಭಾರೀ ಕುತೂಹಲ ಕೆರಳಿಸಿರುವ ವಿಧಾನಪರಿಷತ್ ಚುನಾವಣೆಯ ಮತಎಣಿಕೆಯೂ ನವೆಂಬರ್ 2 ರಂದು ನಡೆಯಲಿದೆ. ಚುನಾವಣೆಯಲ್ಲಿ ಅಂತಿಮವಾಗಿ ಒಟ್ಟು 40 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಮತ್ತು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ನಾಲ್ಕು ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್'ನ ತಲಾ 4 ಅಭ್ಯರ್ಥಿಗಳು, ನೋಂದಾಯಿತ ಪಕ್ಷದಿಂದ 6 ಅಭ್ಯರ್ಥಿಗಳು ಮತ್ತು 22 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 

ಪದವೀಧರ ಕ್ಷೇತ್ರದ ಮತ ಎಣಿಕೆಯು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಒಂದು ಹಾಲ್'ನಲ್ಲಿ ಏಳು ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯು ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ನಡೆಯಲಿದೆ. ಒಂದು ಹಾಲ್'ನಲ್ಲಿ ಏಳು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಮತ ಕ್ಷೇತ್ರದ ಮತ ಎಣಿಕೆಯು ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದ್ದು, ಪ್ರತ್ಯೇಕವಾಗಿ ಎರಡು ಹಾಲ್ ನಲ್ಲಿ ತಲಾ 14  ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com