ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ವಿಶೇಷ ತಂಡ ರಚನೆ, ಆಸ್ಪತ್ರೆಗೆ ಸಿಸಿಬಿ ನೋಟಿಸ್

ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಬಿಗಿಗೊಳಿಸಿದ್ದು, ಈ ಸಂಬಂಧ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ.
ಸಂಪತ್ ರಾಜ್
ಸಂಪತ್ ರಾಜ್

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಬಿಗಿಗೊಳಿಸಿದ್ದು, ಈ ಸಂಬಂಧ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ.

ಹೌದು.. ಕಾಡುಗೊಂಡನಹಳ್ಳಿ(ಕೆಜೆ ಹಳ್ಳಿ) ಮತ್ತು ದೇವರಜೀವನ ಹಳ್ಳಿ(ಡಿಜೆ ಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ಸಿಸಿಬಿ ಪೊಲೀಸರು ವಿಶೇಷ ತಂಡವನ್ನು ರಚನೆ  ಮಾಡಿದ್ದಾರೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ 50 ಪುಟಗಳ ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಸಿದ್ದು, ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದು, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ  ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‍ಶೀಟ್‍ನಲ್ಲಿ ತಿಳಿಸಲಾಗಿದೆ.

ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸಂಪತ್ ರಾಜ್ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂಬ ಅಂಶ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿತ್ತು.

ಮತ್ತೊಂದೆಡೆ ಕೊರೊನಾ ಸೋಂಕು ತಗುಲಿದೆ ಎಂದು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಸಂಪತ್ ರಾಜ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಿಸಿಬಿ ಅಧಿಕಾರಿಗಳು ಬಂಧಿಸುವ ಭೀತಿಯಲ್ಲಿ ರಾತ್ರೋರಾತ್ರಿ ಪರಾರಿಯಾಗಿದ್ದು, ಗುರುವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿತ್ತಾದರೂ. ಬುಧವಾರ ಮಧ್ಯರಾತ್ರಿಯೇ ಡಿಸ್ಚಾರ್ಜ್ ಆಗಿ  ಸಂಪತ್ ರಾಜ್ ಪರಾರಿಯಾಗಿದ್ದಾರೆ. ಸಂಪತ್ ರಾಜ್ ಡಿಸ್ಚಾರ್ಜ್ ಮಾಡುವಾಗ ಸಿಸಿಬಿ ಅಧಿಕಾರಿಗಳ ಗಮನಕ್ಕೆ ತರುವಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸಿಸಿಬಿ ಗಮನಕ್ಕೆ ತರದೇ ರಾತ್ರೋರಾತ್ರಿ ಸಂಪತ್ ರಾಜ್ ಡಿಸ್ಚಾರ್ಜ್ ಆಗಿದ್ದು, ಪರಾರಿಯಾಗಿದ್ದಾರೆ. ಕಾಕ್ಸ್ ಟೌನ್ ನಲ್ಲಿರುವ  ಸಂಪತ್ ರಾಜ್ ಮನೆ ಸಹ ಬೀಗ ಹಾಕಿದ್ದು, ಸಿಸಿಬಿ ತಂಡ ಸಂಪತ್ ರಾಜ್ ಗಾಗಿ ಹುಡುಕಾಟ ನಡೆಸಿದೆ. ಅಲ್ಲದೆ ಡಿಸ್ಚಾರ್ಜ್ ಮಾಡಿದ್ದರ ಕುರಿತು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.

ಸಂಪತ್ ರಾಜ್ ಕೇರಳ ಕಡೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಂಪತ್ ರಾಜ್ ಮೆಡಿಕಲ್ ರಿಪೋರ್ಟ್ ನೋಡಿ ಸಿಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ಸೆಪ್ಟೆಂಬರ್ 14 ರಂದು ಅಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್, ಒಂದೇ ತಿಂಗಳಲ್ಲಿ 4 ಬಾರಿ ಅಡ್ಮಿಟ್, 4 ಬಾರಿ ಡಿಸ್ಚಾರ್ಜ್ ಆಗಿದ್ದಾರೆ. ಈಗ ಮೆಡಿಕಲ್  ರಿಪೋರ್ಟ್ ಸೀಜ್ ಮಾಡಿ ಸಿಸಿಬಿ ತಂಡ ಪರಿಶೀಲನೆ ನಡೆಸಿದೆ. ಸಂಪತ್ ರಾಜ್‍ಗೆ ಚಿಕಿತ್ಸೆ ನೀಡಿದ ವೈದ್ಯರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com