100 ದಿನದಲ್ಲಿ ಬೆಂಗಳೂರಿನಿಂದ 10.04 ಲಕ್ಷ ಮಂದಿ ವಿಮಾನದಲ್ಲಿ ಪ್ರಯಾಣ

ಕೊರೋನಾ ಲಾಕ್ಡೌನ್ ಸಡಿಲಿಕೆ ಬಳಿಕ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವದೇಶಿ ವಿಮಾನ ಸೇವೆ ಪುನಾರಂಭಗೊಂಡು ಮಂಗಳವಾರಕ್ಕೆ ನೂರು ದಿನ ಪೂರೈಸಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ ದೇಶದ 49 ನಗರಗಳಿಗೆ 10.04 ಲಕ್ಷ ಮಂದಿ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. 

Published: 02nd September 2020 08:24 AM  |   Last Updated: 02nd September 2020 08:24 AM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಕೊರೋನಾ ಲಾಕ್ಡೌನ್ ಸಡಿಲಿಕೆ ಬಳಿಕ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವದೇಶಿ ವಿಮಾನ ಸೇವೆ ಪುನಾರಂಭಗೊಂಡು ಮಂಗಳವಾರಕ್ಕೆ ನೂರು ದಿನ ಪೂರೈಸಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ ದೇಶದ 49 ನಗರಗಳಿಗೆ 10.04 ಲಕ್ಷ ಮಂದಿ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. 

ಮೇ.25ರಂದು ನಾಗರೀಕ ವಿಮಾನಯಾನ ಪ್ರಧಾನ ನಿರ್ದೇಶಕರು ಸ್ವದೇಶಿ ವಿಮಾನಯಾನ ಸೇವೆಗೆ ಅನುಮತಿ ನೀಡಿದ ನಂತರ ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆರಂಭಿಸಿದ್ದ ಸ್ವದೇಶಿ ವಿಮಾನ ಸೇವೆ ಇದೀಗ ಯಶಸ್ವಿ ನೂರು ದಿನ ಪೂರೈಸಿದೆ. 

ಈ ನೂರು ದಿನಗಳಲ್ಲಿ 15,658 ಟ್ರಿಪ್ ವಿಮಾನ ಕಾರ್ಯಾಚರಣೆ ಮಾಡಿದ್ದು, 10.04 ಲಕ್ಷ ಮಂದಿ ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. ಕೊರೋನಾ ಪೂರ್ವದಲ್ಲಿ ದೇಶದ 58 ನಗರಗಳಿಗೆ ವಿಮಾನ ಸೇವೆ ನೀಡುತ್ತಿದ್ದ ಕೆಐಎ, ಇದೀಗ 49 ನಗರಗಳಿಗೆ ವಿಮಾನ ಸೇವೆ ನೀಡುತ್ತಿದೆ. ಅಂದರೆ, ಶೇ.84ರಷ್ಟು ಸ್ವದೇಶಿ ವಿಮಾನ ಸಂಚಾರ ಪುನರ್ ಆರಂಭಗೊಂಡಿದೆ. 

ಕೆಐಎ ವಿಮಾನ ನಿಲ್ದಾಣದ ವಾಹನ ಪಾರ್ಕಿಂಗ್ ಸ್ಥಳದಿಂದ ವಿಮಾನ ಏರುವ ಹಂತದವರೆಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್, ಮಾನವ ಸ್ಪರ್ಶ ಹೆಚ್ಚಿರುವ ಸ್ಥಳಗಳು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಶೇ.90ರಷ್ಟು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಬಿಐಎಎಲ್ ತಿಳಿಸಿದೆ. 

49 ನಗರಗಳ ಪೈಕಿ ಅತೀ ಹೆಚ್ಚು ಶೇ.13ರಷ್ಟು ಪ್ರಯಾಣಿಕರು ಕೋಲ್ಕತಾಗೆ ಪ್ರಯಾಣಿಸಿದ್ದು, ದೆಹಲಿಗೆ ಶೇ.11ರಷ್ಟು ಹಾಗೂ ಪಾಟ್ನಾಗೆ ಶೇ.6ರಷ್ಟು ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅಂತೆಯೇ ಪೂರ್ವದ ನಗರಗಳಿಗೆ ಶೇ.33.07, ದಕ್ಷಿಣ ನಗರಗಳಿಗೆ ಶೇ.30.09, ಉತ್ತರದ ನಗರಗಳಿಗೆ ಶೇ.25.08 ಹಾಗೂ ಪಶ್ಚಿಮದ ನಗರಗಳಿಗೆ ಶೇ.9.06ರಷ್ಟು ಪ್ರಯಾಣಿಕರು ವಿಮಾನಗಳಲ್ಲಿ ಸಂಚರಿಸಿದ್ದಾರೆ. 

Stay up to date on all the latest ರಾಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp