ಡ್ರಗ್ಸ್ ವಿಚಾರ: ಕುಮಾರಸ್ವಾಮಿಯನ್ನು ಮೊದಲಿಗೆ ವಿಚಾರಣೆಗೊಳಪಡಿಸಿ - ಪ್ರಮೋದ್ ಮುತಾಲಿಕ್
ಡ್ರಗ್ಸ್ ಆರೋಪ ವಿಚಾರದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೊಳಪಡಿಸಿದಂತೆ ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಕಾಂಗ್ರೆಸ್ ನಾಯಕರು ಡ್ರಗ್ ಮಾಫೀಯಾ ಹಣವನ್ನು ಬಳಸಿಕೊಂಡಿದ್ದಾರೆ.
Published: 03rd September 2020 08:57 PM | Last Updated: 03rd September 2020 08:57 PM | A+A A-

ಪ್ರಮೋದ್ ಮುತಾಲಿಕ್-ಕುಮಾರಸ್ವಾಮಿ
ದಾವಣಗೆರೆ: ಡ್ರಗ್ಸ್ ಆರೋಪ ವಿಚಾರದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೊಳಪಡಿಸಿದಂತೆ ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಕಾಂಗ್ರೆಸ್ ನಾಯಕರು ಡ್ರಗ್ ಮಾಫೀಯಾ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನೂ ಸಹ ವಿಚಾರಣೆಗೊಳಪಡಿಸಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಡ್ರಗ್ ಮಾಫೀಯಾದಲ್ಲಿ ಯಾರಿದ್ದಾರೆ ಎಂದು ಪೊಲೀಸರಿಗೂ ಗೊತ್ತಿದೆ. ಇಡೀ ಚಿತ್ರರಂಗ ಭಾಗಿಯಾಗಿದೆ ಎಂದು ಇಂದ್ರಜಿತ್ ಲಂಕೇಶ್ ಆರೋಪ ಮಾಡುತ್ತಿದ್ದಾರೆ. ಆದರೆ ಇದರಲ್ಲಿ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆ ಕೈವಾಡ ಇದೆ, ಪ್ರತಿಯೊಂದು ಮಾಹಿತಿ ಪೊಲೀಸರಿಗೆ ಗೊತ್ತು. ಆದರೆ ರಾಜಕಾರಣಿಗಳು ಅವರ ಕೈ ಕಟ್ಟಿಹಾಕಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ದಿ.ರಾಕೇಶ್ ಹೆಸರನ್ನು ಪ್ರಸ್ತಾಪಿಸಿದ ಮುತಾಲಿಕ್, ರಾಕೇಶ್ ಸಿದ್ದರಾಮಯ್ಯ ಸಾವಿಗೆ ಡ್ರಗ್ಸ್ ಕಾರಣವಾಗಿದ್ದು, ರಾಕೇಶ್ ಡ್ರಗ್ಸ್ ಸೇವಿಸುತ್ತಿದ್ದರು. ಮುಸ್ಲಿಂರ ಹೆಸರಿನಲ್ಲಿ ಡ್ರಗ್ ಜಿಹಾದ್ ಹುಟ್ಟಿಕೊಂಡಿದೆ. ಬೇಹುಗಾರಿಕೆ ಇಲಾಖೆ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದೆ. ಜೊತೆಗೆ, ಎಲ್ಲಾ ಮೂರು ಪಕ್ಷಗಳು ಇದರಲ್ಲಿ ಶಾಮೀಲಾಗಿವೆ ಎಂದು ಗಂಭೀರ ಆರೋಪ ಮಾಡಿದರು.
ಮಂಗಳೂರಿನಲ್ಲಿ 2009ರ ಪಬ್ ಗಲಾಟೆ ನಡೆದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನನ್ನನ್ನು ಮಾತ್ರ ಟಾರ್ಗೆಟ್ ಮಾಡಿ 15 ದಿನ ಜೈಲಿಗೆ ಕಳಿಸಿತ್ತು. ಡ್ರಗ್ ದಂಧೆಯ ಬಗ್ಗೆ ಟಾರ್ಗೆಟ್ ಮಾಡಲೇ ಇಲ್ಲ. ಆಗ ಪಬ್ ಗಳಲ್ಲಿ ಡ್ರಗ್ ಇತರೆ ಮಾಫಿಯಾ ನಡೆಯುತ್ತಿದೆ ಎಂದು ಕೂಗಾಡಿದರೂ ಸರ್ಕಾರ ನನ್ನ ಮಾತನ್ನು ಕೇಳಲಿಲ್ಲ. ಅದರ ಫಲವೇ ಈಗ ನೋಡುತ್ತಿದ್ದೇವೆ ಎಂದರು.