ಡ್ರಗ್ಸ್ ದಂಧೆ ಸಿಸಿಬಿಯಿಂದಲೇ ತನಿಖೆ, ಎಸ್ ಐಟಿ ರಚನೆ ಇಲ್ಲ: ಬೊಮ್ಮಾಯಿ

ಕರ್ನಾಟಕದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಮಾರಕ ಡ್ರಗ್ಸ್ ದಂಧೆ ವಿಚಾರಣೆಗೆ ಎಸ್ಐಟಿ ರಚನೆ ಮಾಡುವುದಿಲ್ಲ. ಸಿಸಿಬಿಯೇ ತನಿಖೆ ಮುಂದುವರೆಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಕರ್ನಾಟಕದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಮಾರಕ ಡ್ರಗ್ಸ್ ದಂಧೆ ವಿಚಾರಣೆಗೆ ಎಸ್ಐಟಿ ರಚನೆ ಮಾಡುವುದಿಲ್ಲ. ಸಿಸಿಬಿಯೇ ತನಿಖೆ ಮುಂದುವರೆಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಮಾದಕ ಜಾಲದ ನಂಟಿನ ಆರೋಪದ ಕುರಿತು ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ ಇಂದು ನಡೆದ ಸಂಪುಟ ಸಭೆಯಲ್ಲೂ ಈ ವಿಚಾರವನ್ನು ಚರ್ಚಿಸಲಾಯಿತು.ಸಭೆಯಲ್ಲಿ ಸ್ಯಾಂಡಲ್ ವುಡ್ ಮಾದಕ ಜಾಲದ ನಂಟಿನ ವಿಷಯವನ್ನು ಪ್ರಸ್ತಾಪಿಸಿದ ಗೃಹ ಸಚಿವರು, ಸದ್ಯದ ಪರಿಸ್ಥಿತಿ ಯಲ್ಲಿ  ಪ್ರಕರಣದ ತನಿಖೆಯನ್ನು ಸಂಪೂರ್ಣವಾಗಿ ಸಿಸಿಬಿಯಿಂದಲೇ ಕೈಗೊಳ್ಳಲಾಗುವುದು. ಈ ಕುರಿತು ಎಸ್ ಐಟಿ ತಂಡ ರಚಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಾದಕ ಜಾಲ ಭೇದಿಸಲು ಪೊಲೀಸರಿಗೆ ಸಂಪೂರ್ಣವಾದ ಅಧಿಕಾರ ನೀಡಲಾಗಿದ್ದು, ಈಗಾಗಲೇ ಡ್ರಗ್ಸ್ ನಿಯಂತ್ರಣದ ಕುರಿತಾಗಿ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಡ್ರಗ್ಸ್ ರಾಜ್ಯಕ್ಕೆ ಪ್ರವೇಶಿಸದಂತೆ ಮಹಾರಾಷ್ಟ್ರ, ತೆಲಂಗಾಣ, ಗೋವಾ, ಆಂಧ್ರಪ್ರದೇಶದ ಗಡಿ  ಭಾಗದಲ್ಲಿ ಹದ್ದಿನ ಕಣ್ಣಿಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅಲ್ಲದೇ, ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು. 

ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬೊಮ್ಮಾಯಿ ಅವರು, ಡ್ರಗ್ಸ್ ದಂಧೆ ಪ್ರಕರಣದಲ್ಲಿ ಕೆಲ ನಟ ನಟಿಯರ ಹೆಸರು ಕೇಳಿಬಂದಿದೆ. ಈಗಾಗಲೇ ಕೆಲವರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಸಿಸಿಬಿಯೇ ಪ್ರಕರಣ ತನಿಖೆ ನಡೆಸುತ್ತದೆ. ಸದ್ಯಕ್ಕೆ ಎಸ್ ಐಟಿ ರಚನೆ ಮಾಡುವ ಅಗತ್ಯವಿಲ್ಲ ಎಂದು  ಸಚಿವ ಸಂಪುಟ ಸಭೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು. ಅಂತೆಯೇ ಡ್ರಗ್ಸ್ ನಿಯಂತ್ರಿಸುವ ಸಂಬಂಧ ಸಭೆ ನಡೆಸಿದ್ದೇನೆ. ಡ್ರಗ್ಸ್ ಮಟ್ಟ ಹಾಕಲು ಸಂಪೂರ್ಣ ಅಧಿಕಾರ ನೀಡಿದ್ದೇನೆ. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ,  ಗಡಿಯ ಎಲ್ಲಾ ಎಸ್ಪಿಗಳಿಗೆ ತಪಾಸಣೆ ನಡೆಸುವಂತೆ ಸೂಚನೆ  ನೀಡಿದ್ದೇನೆ. ಇನ್ನು ಡ್ರಗ್ಸ್ ದಂಧೆಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ರಾಜಿಯಾಗೋ ಮಾತೇ ಇಲ್ಲ.  ಯಾವುದೇ ರಾಜಕೀಯ ಒತ್ತಡವಿದ್ದರೂ ಸಹ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com