ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ನಟಿ ರಾಗಿಣಿಯಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಪ್ರಯತ್ನ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿ ಬಿಜೆಪಿಯ ಸದಸ್ಯರಲ್ಲ,  2019ರ ವಿಧಾನಸಭಾ ಉಪ ಚುನಾವಣೆ ಸಂದರ್ಭದಲ್ಲಿ ಸ್ವಯಂ ಪ್ರೇರಣೆಯಿಂದ  ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ರಾಜ್ಯ ಬಿಜೆಪಿ  ಭಾನುವಾರ ಹೇಳಿದೆ.
ನಟಿ ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿ ಬಿಜೆಪಿಯ ಸದಸ್ಯರಲ್ಲ,  2019ರ ವಿಧಾನಸಭಾ ಉಪ ಚುನಾವಣೆ ಸಂದರ್ಭದಲ್ಲಿ ಸ್ವಯಂ ಪ್ರೇರಣೆಯಿಂದ  ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ರಾಜ್ಯ ಬಿಜೆಪಿ  ಭಾನುವಾರ ಹೇಳಿದೆ.

ರಾಗಿಣಿ ದ್ವಿವೇದಿ ಬಂಧನಕ್ಕೊಳಗಾದ ಬೆನ್ನಲ್ಲೇ ನಟಿಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ, ಯಾವುದೇ ರೀತಿಯ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧವಾಗಿ ಇರುವುದಾಗಿ ಹೇಳಿಕೊಂಡಿದೆ.

2019ರ ಉಪ ಚುನಾವಣೆ ಸಂದರ್ಭದಲ್ಲಿ ನೂರಾರು ಸೆಲೆಬ್ರಿಟಿಗಳು ಪಕ್ಷದ ಪ್ರಚಾರಾಂದೋಲನದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು. ಅವರಲ್ಲಿ ರಾಗಿಣಿ ದ್ವಿವೇದಿ ಕೂಡಾ ಒಬ್ಬರಾಗಿದ್ದರು ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದ್ವಿವೇದಿ ಪಕ್ಷದ ಸದಸ್ಯರೂ ಅಲ್ಲ ಅಥವಾ ಚುನಾವಣಾ ಸಂದರ್ಭದಲ್ಲಿ ಅವರಿಗೆ ಪಕ್ಷ ಯಾವುದೇ ಹೊಣೆ ವಹಿಸಿರಲಿಲ್ಲ ಎಂದು ಸ್ಪಷ್ಪಪಡಿಸಿದ ಕಾರ್ನಿಕ್, ಅವರು ಸ್ವಯಂ ಪ್ರೇರಣೆಯಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆಕೆಯ ವೃತ್ತಿ  ಜೀವನ ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಕ್ಷ ಯಾವುದೇ ಹೊಣೆ ಹೊರುವುದಿಲ್ಲ ಅಥವಾ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

ಇಂತಹ ಚಟುವಟಿಕೆಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ, ಮಾದಕ ವಸ್ತು ಜಾಲದಲ್ಲಿ ತೊಡಗಿಸಿಕೊಂಡಿರುವುದಕ್ಕೆ ರಾಗಿಣಿ ದ್ವಿವೇದಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ತಾಸುಗಳ ವಿಚಾರಣೆ ಬಳಿಕ ಶುಕ್ರವಾರ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ರಾಗಿಣಿ ಸೇರಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com