ಬೆಂಗಳೂರಿನಲ್ಲಿ ಮೊದಲ ಅಧಿಕೃತ ಸೋಂಕು ಮರುಕಳಿಸಿದ ಪ್ರಕರಣ ಪತ್ತೆ: ಗುಣಮುಖರಾಗಿದ್ದ ಮಹಿಳೆಗೆ ಮತ್ತೆ ಬಂತು ಕೊರೋನಾ!

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಮಹಾಮಾರಿ ಕೊರೋನಾ ವಕ್ಕರಿಸಿದ್ದು, ಬೆಂಗಳೂರಿನಲ್ಲಿ ಇಂತಹ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಮಹಾಮಾರಿ ಕೊರೋನಾ ವಕ್ಕರಿಸಿದ್ದು, ಬೆಂಗಳೂರಿನಲ್ಲಿ ಇಂತಹ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. 

27 ವರ್ಷದ ಮಹಿಳೆಗೆ ಸೋಂಕಿನಿಂದ ಗುಣಮುಖವಾದ 1 ತಿಂಗಳಿಗೆ ಮತ್ತೆ ಕೊರೋನಾ ಮರುಕಳಿಸಿದ್ದು, ಈ ಪ್ರಕರಣ ಸಾರ್ವಜನಿಕರನ್ನಷ್ಟೇ ಅಲ್ಲದೆ ಆರೋಗ್ಯ ಇಲಾಖೆ ಕೂಡ ಅತಂಕಕ್ಕೀಡಾಗುವಂತೆ ಮಾಡಿದೆ. 

ಹೀಗಾಗಿ ಸೋಂಕಿನಿಂದ ಗುಣಮುಖರಾಗಿದ್ದರೂ ಮತ್ತೆ ಸೋಂಕು ಉಂಟಾಗಬಹುದಾಗಿರುವುದರಿಂದ ಎಚ್ಚರ ತಪ್ಪಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ. 

ಸೋಂಕಿತರು ಒಂದು ಬಾರಿ ಸೋಂಕಿನಿಂದ ಗುಣಮುಖರಾದ ಕೂಡಲೇ ತಾವು ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡಿದ್ದೇವೆಂಬ ಭ್ರಮೆಯಲ್ಲಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ದೈಹಿಕ ಅಂತರ ಕಾಪಾಡುವುದು ಮುಖ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಗುಣಮುಖರಾದವರಲ್ಲಿ ಸೋಂಕು ಮರುಕಳಿಸಿರುವ ಬಗ್ಗೆ ಮೇ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಒಂದು ಪ್ರಕರಣ ವರದಿಯಾಗಿತ್ತು. ಏಪ್ರಿಲ್ 15ರಂದು ಸೋಂಕು ದೃಢಪಟ್ಟಿದ್ದ ವ್ಯಕ್ತಿಗೆ ಏಪ್ರಿಲ್ 30 ಹಾಗೂ ಮೇ.1 ರಂದು ಎರಡು ಬಾರಿ ನೆಗೆಟಿವ್ ವರದಿ ಬಂದ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಆದರೆ, ಮೇ.5ಕ್ಕೆ ಮತ್ತೆ ಸೋಂಕು ದೃಢಪಟ್ಟಿತ್ತು. ಆ ವ್ಯಕ್ತಿಯಲ್ಲಿ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆ ಇತ್ತು. ಜೊತೆಗೆ ಅವರಲ್ಲಿ ಆ್ಯಂಟಿಬಾಡೀಸ್ ಉತ್ಪತ್ತಿಯಾಗಿತ್ತೆ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. 

ಇದೀಗ ಬೆಂಗಳೂರಿನ ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯಲ್ಲಿ 27 ವರ್ಷದ ಮಹಿಳೆಗೆ ಸೋಂಕಿನಿಂದ ಗುಣಮುಖವಾದ ಬರೋಬ್ಬರಿ 1 ತಿಂಗಳ ಬಳಿಕ ಮತ್ತೆ ಸೋಂಕು ಮರುಕಳಿಸಿದೆ. ಅಲ್ಲದೆ, ಪರೀಕ್ಷೆ ವೇಳೆ ಪ್ರತಿಕಾಯ (ಆ್ಯಂಟಿಬಾಡೀಸ್) ಇಲ್ಲದಿರುವುದು ಪತ್ತೆಯಾಗಿದ್ದು, ಸೋಂಕಿತರೆಲ್ಲರಿಗೂ ಪ್ರತಿಕಾಯಶಕ್ತಿ ವೃದ್ಧಿಸುತ್ತಿದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿದೆ. 

ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ ಆರ್'ಟಿ-ಪಿಸಿಆರ್ ಪರೀಕ್ಷೆ ಎರಡಲ್ಲಿಯೂ ಮಹಿಳೆಗೆ ಕೊರೋನಾ ಇದೆ ಎಂದು ದೃಢಪಡಿಸಿದೆ. ಇದರಿಂದ ನಗರದಲ್ಲಿ ಗುಣಮುಖರಾಗಿ ಮತ್ತೆ ಸೋಂಕಿಗೊಳಗಾದ ಮೊದಲ ಪ್ರಕರಣ ಇದಾಗಿದೆ. ಭಾನುವಾರ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ನೂತನ ನಿಯಮದ ಅನ್ವಯ ಬಿಡುಗಡೆಗೂ ಮುನ್ನ ಮಹಿಳೆಗೆ ಕೊರೋನಾ ಪರೀಕ್ಷೆ ಮಾಡಿಲ್ಲ ಎಂದು ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯ ವೈದ್ಯ ಪ್ರತೀಕ್ ಪಾಟೀಲ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com