ಜಿಡಿಪಿ ಕುಸಿತದಿಂದ 18 ಲಕ್ಷ ಕೋಟಿ ರೂ ನಷ್ಟ: 15 ಕೋಟಿ ಜನರಿಗ ಕೈ ತಪ್ಪಿದ ಉದ್ಯೋಗ - ಸಿದ್ದರಾಮಯ್ಯ
ದೇಶದ ಜಿಡಿಪಿ ದರ ಗಣನೀಯವಾಗಿ ಕುಸಿದಿದ್ದು, ಇನ್ನು ಮೂರು ತಿಂಗಳಲ್ಲಿ ಇದು ಮತ್ತಷ್ಟು ತಗ್ಗುವ ಆತಂಕ ವ್ಯಕ್ತವಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಉದ್ಬವವಾಗಲಿದ್ದು, ರಾಜ್ಯ ಹಾಗೂ ದೇಶದಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Published: 07th September 2020 04:27 PM | Last Updated: 07th September 2020 04:27 PM | A+A A-

ಸಿದ್ದರಾಮಯ್ಯ
ಬೆಂಗಳೂರು: ದೇಶದ ಜಿಡಿಪಿ ದರ ಗಣನೀಯವಾಗಿ ಕುಸಿದಿದ್ದು, ಇನ್ನು ಮೂರು ತಿಂಗಳಲ್ಲಿ ಇದು ಮತ್ತಷ್ಟು ತಗ್ಗುವ ಆತಂಕ ವ್ಯಕ್ತವಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಉದ್ಬವವಾಗಲಿದ್ದು, ರಾಜ್ಯ ಹಾಗೂ ದೇಶದಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ 21 ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡುವ ಉದ್ದೇಶದಿಂದ ಪಕ್ಷದ ಶಾಸಕರ ಜತೆ ವರ್ಚಯುಲ್ ವೇದಿಕೆ ಮೂಲಕ ಸಮಾಲೋಚನೆ ನಡೆಸಿದ ಅವರು, ಸರ್ಕಾರ ಶಿಕ್ಷಕರಿಗೆ ಸಂಬಳ ಕೊಡುತ್ತಿಲ್ಲ. ಶಿಕ್ಷಣ ಸಮೂಹ ತೀವ್ರ ಸಮಸ್ಯೆಯಲ್ಲಿದೆ. ಕೇಂದ್ರ ಸರ್ಕಾರ ಅಡುಗೆ ಅನಿಲ್ ಸಿಲಿಂಡರ್ ಸಬ್ಸಿಡಿ ರದ್ಧು ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಧೋರಣೆಯಿಂದ ಜನಜೀವನ ತೀವ್ರ ಬಾಧಿತವಾಗದೆ. ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಕಡಿತವಾಗಿದ್ದು, ಬಿಜೆಪಿ ನಾಯಕರು ಈ ಕುರಿತು ಮಾತನಾಡಬೇಕು. ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ಕೆಳಗಿಳಿಯಬೇಕು. ಸುಮ್ಮನೆ ಭಾಷಣ ಮಾಡಿದರೆ ಏನೂ ಪ್ರಯೋಜನವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಇವತ್ತು ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಿದ್ದರೆ ಅದಕ್ಕೆ ನರೇಂದ್ರ ಮೋದಿ ಸರ್ಕಾರವೇ ಕಾರಣವಾಗಿದೆ. ಜಿಡಿಪಿ ಎಲ್ಲಿಗೆ ಕುಸಿದಿದೆ ಎಂಬುದನ್ನು ನೋಡಿಕೊಳ್ಳಬೇಕು. ಇಷ್ಟೊಂದು ಕೆಳಮಟ್ಟಕ್ಕೆ ಜಿಡಿಪಿ ಹಿಂದೆಂದೂ ಇಳಿದಿರಲಿಲ್ಲ. ಒಟ್ಟಾರೆ ಶೇ 23 ಜಿಡಿಪಿ ಕುಸಿದಿದ್ದು, 18 ಲಕ್ಷ ಕೋಟಿ ರೂ ನಷ್ಟವಾಗಿದೆ. 15 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡ್ರಗ್ಸ್ ಮಾಫಿಯಾ ತಡೆಗೆ ಪ್ರಬಲ ಕಾಯ್ದೆ ಬರಲಿ
ಡ್ರಗ್ಸ್ ಎಲ್ಲಾ ಕಾಲದಲ್ಲಿಯೂ ಇತ್ತು. ನಮ್ಮ ಸರ್ಕಾರವೂ ಅದನ್ನು ಮಟ್ಟ ಹಾಕಲು ಪ್ರಯತ್ನಿಸಿತ್ತು. ಈಗ ಯಡಿಯೂರಪ್ಪ ಆಡಳಿತದಲ್ಲಿ ಇದು ಬಯಲಾಗಿದೆ. ತಪ್ಪಿತಸ್ಥರು ಯಾರಾಗಿದ್ದರೂ ಅವರುಗೆ ಕಠಿಣ ಶಿಕ್ಷೆ ಆಗಬೇಕು. ಡ್ರಗ್ಸ್ ಮಾಫಿಯಾ ತಡೆಗೆ ರಾಜ್ಯ ಸರ್ಕಾರದಿಂದ ಪ್ರಬಲ ಕಾನೂನು ಜಾರಿಯಾಗಬೇಕು. ನಾನೂ ಇದಕ್ಕೆ ಬೆಂಬಲ ಸೂಚಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಜಮೀರ್ ವಿರುದ್ಧ ಸಾಕ್ಷಿ ಏನಿದೆ?
ಶಾಸಕ ಜಮೀರ್ ಅಹ್ಮದ್ ಕಾನ್ ವಿರುದ್ಧ ಮಾತನಾಡಿದ್ದ ಪ್ರಶಾಂತ್ ಸಂಬರಗಿ ಬಗೆಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಜಮೀರ್ ವಿರುದ್ಧ ಯಾವ ಸಾಕ್ಷ್ಯ ಇದೆ? ಆರೋಪಿಸಲು ಮುನ್ನ ದಾಖಲೆಗಳಿರಬೇಕು. ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.