ಮಂಡ್ಯದ ಅಭಿನವ ಭಾರತಿ ``ದಾದಾ’’ ಇನ್ನಿಲ್ಲ

ಮಂಡ್ಯದ ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದ ಅನಂತ ಕುಮಾರಸ್ವಾಮೀಜಿ ಮಂಗಳವಾರ ನಿಧನರಾದರು.
ಅನಂತ ಕುಮಾರಸ್ವಾಮೀಜಿ
ಅನಂತ ಕುಮಾರಸ್ವಾಮೀಜಿ

ಮಂಡ್ಯ: ಮಂಡ್ಯದ ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದ ಅನಂತ ಕುಮಾರಸ್ವಾಮೀಜಿ ಮಂಗಳವಾರ ನಿಧನರಾದರು.

ಸುಮಾರು ೮೪ ವರ್ಷದ ಶ್ರೀಗಳು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ..ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲೆ ಸಾವನ್ನಪ್ಪಿದರು.

ಮಂಡ್ಯದ ಶಂಕರನಗರದ ಬಳಿ ಇರುವ ಅಭಿನವ ಭಾರತಿ ಕಾಲೇಜಿನ ಆವರಣದಲ್ಲಿ ಸಾರ್ವಜನಿಕರಿಗೆ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆಮಾಡಲಾಗಿದ್ದು, ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

ಶ್ರೀ ಅನಂತ ಕುಮಾರಸ್ವಾಮೀಜಿ ನಿಧನಕ್ಕೆ ಮಂಡ್ಯ ನಗರದ ಸಹಸ್ರಾರು ವಿದ್ಯಾರ್ಥಿವೃಂದ, ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರೂ ಆದ ಬೇಲೂರು ಸೋಮಶೇಖರ್, ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್,ಪಿ.ಇ.ಟಿ.ಅಧ್ಯಕ್ಷ ವಿಜಯಾನನಂದ ಸೇರಿದಂತೆ ಹಲವು ಗಣ್ಯರು,ಶಿಕ್ಷಕ ವೃಂದ ಅಂತಿಮ ದರ್ಶನ ಪಡೆದರು.

ನಾಳೆ ಬೆಳಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಂಡ್ಯಕ್ಕೆ ಬೇಟಿ ನೀಡಲಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಆಪ್ತ ಮೂಲಗಳಿದ ತಿಳಿದು ಬಂದಿದೆ.

೭೦ರ ದಶಕದಲ್ಲಿ ಉತ್ತರ ಭಾರತದ ಕಾಶಿಯಿಂದ ಕರ್ನಾಟಕಕ್ಕೆ ಬಂದು ಮಂಡ್ಯದಲ್ಲಿ ನೆಲೆಸಿ ಜೋಪಡಿಯಲ್ಲಿ 'ಅಭಿನವ ಭಾರತಿ ವಿದ್ಯಾಸಂಸ್ಥೆ' ಆರಂಭಿಸಿದರು. ಅದನ್ನು ಮಂಡ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಮಾರ್ಪಡಿಸಿ ಮಕ್ಕಳಿಗೆ ಸಾಂಪ್ರದಾಯಿಕ ವಿದ್ಯೆಯ ಜೊತೆಗೆ ಅಧ್ಯಾತ್ಮ, ಕಲೆ,ಸಾಹಿತ್ಯ, ನೈತಿಕ ಶಿಕ್ಷಣ ಸೇರಿದಂತೆ ಸೃಜನಾತ್ಮಕವಾಗಿ ಮಕ್ಕಳಿಗೆ ವಿದ್ಯೆ ದೊರೆಯುವಂತೆ ಮಾಡಿದರು. 
ಜನರ ಬಾಯಲ್ಲಿನ ಪ್ರೀತಿಯ 'ದಾದಾ' ಅಂತಾನೇ ಖ್ಯಾತಿ ಪಡೆದಿದ್ದ ಶ್ರೀ ಅನಂತಕುಮಾರ ಸ್ವಾಮೀಜಿ ಇಂದು ಇಹಲೋಕ ತ್ಯಜಿಸಿದ್ದಾರೆ.
ಜೋಪಡಿಯಲ್ಲಿ ಶಿಕ್ಷಣ ಆರಂಭಿಸಿದ ದಾದಾ, ಇಂದು ಮಂಡ್ಯನಗರ, ಕಾಳೇನಹಳ್ಳಿ, ಬೂದನೂರು, ಹೊಳಲು,ಕೊಪ್ಪ ಬಳಿಯ ಮೂಡಲದೊಡ್ಡಿಯಲ್ಲಿಯ ಸೇರಿದಂತೆ ೬ ಕಡೆ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದು ಪ್ರಸ್ತುತ ಸುಮಾರು ೨೦೦೦ ಕ್ಕೂ ಹೆಚ್ಚು ವಿದ್ಯಾಥಿಗಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ
 -ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com