ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಪರೀಕ್ಷಾ ಮಂಡಳಿಗಳು ಶೀಘ್ರ ವಿಲೀನ: ಎಸ್ ಸುರೇಶ್‌ಕುಮಾರ್
ರಾಜ್ಯದಲ್ಲಿ ಈಗಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಪರೀಕ್ಷಾ ಮಂಡಳಿಗಳು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಪ್ರತ್ಯೇಕವಾಗಿ ನಡೆಸುತ್ತಿದ್ದು, ನೂತನ ಶಿಕ್ಷಣ ನೀತಿಯ ಪ್ರಕಾರ ಬೇರೆ ರಾಜ್ಯಗಳ ರೀತಿಯೇ ರಾಜ್ಯದಲ್ಲಿಯೂ ಕೂಡ ಎರಡು ಪರೀಕ್ಷಾ ಮಂಡಳಿಗಳನ್ನು ಶೀಘ್ರದಲ್ಲಿ ವಿಲೀನಗೊಳಿಸಲಾಗುವುದು.
Published: 08th September 2020 01:44 PM | Last Updated: 08th September 2020 01:44 PM | A+A A-

ಸುರೇಶ್ ಕುಮಾರ್
ಚಾಮರಾಜನಗರ: ಕೋವಿಡ್ ಪರಿಣಾಮದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ನೂತನವಾಗಿ ಜಾರಿಗೆ ತಂದಂತಹ ವಿದ್ಯಾಗಮ ಯೋಜನೆಯು ಪೋಷಕರ ಹಾಗೂ ವಿದ್ಯಾರ್ಥಿಗಳ ಮನವೊಲಿಸಿದ್ದು, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಕಳೆದ ವರ್ಷಗಳಿಗೆ ಹೋಲಿಸಿದರೆ ದಾಖಲಾತಿ ಹಾಗೂ ಹಾಜರಾತಿಯ ಪ್ರಮಾಣ ಹೆಚ್ಚಾಗುತ್ತಿದೆ.
ಇದನ್ನು ಪರಿಗಣಿಸಿರುವ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರಿಗೆ ಮತ್ತಷ್ಟು ತರಬೇತಿಗಳನ್ನು ನೀಡಿ, ಸಿದ್ದತೆಗೊಳಿಸುವುದರ ಜೊತೆಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಚಾಮರಾಜನಗರದಲ್ಲಿ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು ರಾಜ್ಯದೆಲ್ಲೆಡೆ 276 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಎಲ್‌ಕೆಜಿ ಇಂದ 12ನೇ ತರಗತಿಯವರೆಗೆ ಒಂದೇ ಸೂರಿನಡಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಈ ಪಬ್ಲಿಕ್ ಶಾಲೆಯಲ್ಲಿ ನೀಡುತ್ತಿದ್ದು, ಈ ಬಗ್ಗೆ ಪೋಷಕರಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ರಾಜ್ಯದೆಲ್ಲೆಡೆ ಸಾಕಷ್ಟು ಶಾಸಕರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮತ್ತಷ್ಟು ತೆರೆಯಬೇಕೆಂದು ಮನವಿ ಸಲ್ಲಿಸುತ್ತಿದ್ದಾರೆ. ಈಗ ಒಂದು ಕೊಠಡಿಗೆ 30 ವಿದ್ಯಾರ್ಥಿಗಳ ಪ್ರವೇಶ ಮಾತ್ರ ಲಭ್ಯವಿದ್ದು, ಶಾಲೆಗೆ ಅರ್ಜಿ ಸಲ್ಲಿಸಿದ ಪೋಷಕರು ತಮ್ಮ ಮಗುವಿಗೂ ಕೂಡ ಪಬ್ಲಿಕ್ ಶಾಲೆಯಲ್ಲಿ ಪ್ರವೇಶಾತಿ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ.
ಇದನ್ನು ಶಿಕ್ಷಣ ಇಲಾಖೆಯು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚುವರಿ ಕೊಠಡಿಗಳ ಮೂಲಕ ದ್ವಿಗುಣಗೊಳಿಸಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದ ಅವರು, ರಾಜ್ಯದಲ್ಲಿ ಈಗಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಪರೀಕ್ಷಾ ಮಂಡಳಿಗಳು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಪ್ರತ್ಯೇಕವಾಗಿ ನಡೆಸುತ್ತಿದ್ದು, ನೂತನ ಶಿಕ್ಷಣ ನೀತಿಯ ಪ್ರಕಾರ ಬೇರೆ ರಾಜ್ಯಗಳ ರೀತಿಯೇ ರಾಜ್ಯದಲ್ಲಿಯೂ ಕೂಡ ಎರಡು ಪರೀಕ್ಷಾ ಮಂಡಳಿಗಳನ್ನು ಶೀಘ್ರದಲ್ಲಿ ವಿಲೀನಗೊಳಿಸಿ, ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಪ್ರಕಟಿಸಿದರು.
ವರದಿ ಗೂಳಿಪುರ ನಂದೀಶ.ಎಂ.