ಹೋಮ್ ಐಸೋಲೇಷನ್ ನಲ್ಲಿರುವ ಕೋವಿಡ್-19 ಸೋಂಕಿತರ ಮನೆ ಬಾಗಿಲಿಗೇ ಔಷಧಿ: ಬಿಬಿಎಂಪಿ

ಹೋಮ್ ಐಸೋಲೇಷನ್ ನಲ್ಲಿರುವ ಕೋವಿಡ್-19 ಸೋಂಕಿತರ ಮನೆ ಬಾಗಿಲಿಗೇ ಔಷಧಿ ನೀಡುವ ಕುರಿತು ಬಿಬಿಎಂಪಿ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೋಮ್ ಐಸೋಲೇಷನ್ ನಲ್ಲಿರುವ ಕೋವಿಡ್-19 ಸೋಂಕಿತರ ಮನೆ ಬಾಗಿಲಿಗೇ ಔಷಧಿ ನೀಡುವ ಕುರಿತು ಬಿಬಿಎಂಪಿ ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಹೌದು.. ಕೋವಿಡ್ ಆರೈಕೆ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ತೀರಾ ಕಡಿಮೆ ಆಗಿದೆ. ಬಹುತೇಕ ಸೋಂಕಿತರು ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಲು ನಿರ್ಧರಿಸುತ್ತಿದ್ದು, ಹೀಗಾಗಿ ಸೋಂಕಿತರ ಮನೆ ಬಾಗಿಲಿಗೇ ಔಷಧಿ ವಿತರಿಸುವ ಕುರಿತು ಬಿಬಿಎಂಪಿ ಗಂಭೀರ ಚಿಂತನೆಯಲ್ಲಿ  ತೊಡಗಿದೆ.  ಈ ಬಗ್ಗೆ ಸ್ವತಃ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಮಾಹಿತಿ ನೀಡಿದ್ದು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಮನೆಯಲ್ಲಿರುವ ಕೋವಿಡ್-19 ರೋಗಿಗಳಿಗೆ ಔಷಧಿಗಳನ್ನು ಪೂರೈಸಲು ಸರ್ಕಾರದ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಸ್ಟ್ಯಾಂಡರ್ಡ್ ಔಷಧಿಗಳ ಹೊರತಾಗಿ,  ವೈದ್ಯರು ಸೂಚಿಸಿದಂತೆ ಹೆಚ್ಚುವರಿ ಔಷಧಿಗಳನ್ನು ಸಹ ರೋಗಿಗಳ ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ. ಇದರಿಂದ ಸೋಂಕಿತರ ಮನೆಯವರು ಔಷಧಿ ಖರೀದಿಗಾಗಿ ಹೊರಗೆ ಬಂದು ಮೆಡಿಕಲ್ ಸ್ಟೋರ್ ಗೆ ಹೋಗುವುದು ತಪ್ಪುತ್ತದೆ ಎಂದು ಹೇಳಿದರು.

ಅಂತೆಯೇ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿರುವವರ ಆತ್ಮ ವಿಶ್ವಾಸ ಬೆಳೆಸುವುದು ಮುಖ್ಯವಾಗಿದ್ದು, ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವುದು ಮತ್ತು ಅವರು ಚೆನ್ನಾಗಿ ನೋಡಿಕೊಳ್ಳುವುದನ್ನು ಬಹಳ ಮುಖ್ಯ. ಮನೆಯಲ್ಲಿರುವ ಸೋಂಕಿತರನ್ನು  ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಬೇಕು. ನಗರದಲ್ಲಿರುವ ಒಟ್ಟಾರೆ ಸೋಂಕಿತರ ಪೈಕಿ ಸುಮಾರು ಶೇ.45-50 ಕೋವಿಡ್ ರೋಗಿಗಳು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಅವರನ್ನು ನಿರಂತರವಾಗಿ ಮೇಲ್ವಿಚಾರಣೆ  ಮಾಡಬೇಕು ಎಂದು ಹೇಳಿದರು. 

ಕೊರೋನಾ ವೈರಸ್ ಸೋಂಕಿನ ನಡುವೆಯೂ ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆದರೆ ನಾಗರಿಕರು ಯಾವುದೇ ರೀತಿಯ ಭಯವಿಲ್ಲದೇ ಮಾಸ್ಕ್ ಇಲ್ಲದೆ ತಿರುಗಾಡುತ್ತಿದ್ದಾರೆ. ಅಂತೆಯೇ ಕನಿಷ್ಠ ಪಕ್ಷ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಕೋವಿಡ್ ನಿಯಮಗಳನ್ನು ಪಾಲಿಸದವರ  ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಕಾನೂನು ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಿದೆ. ಪ್ರಸ್ತುತ ಮಾಸ್ಕ್ ಅಥವಾ ಸಾಮಾಜಿಕ ಅಂತರವಿಲ್ಲದಿರುವುದು ಕಂಡು ಬಂದರೆ ದಂಡ  ಮಾತ್ರ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿ, ಮತ್ತಷ್ಟು ಕಾನೂನು ಶಿಕ್ಷೆಗೆ ಒಳಪಡಿಸಲು ಚಿಂತಿಸಲಾಗುತ್ತಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು. 

ಇದೇ ವಿಚಾರವಾಗಿ ಮಾತನಾಡಿದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು, ನಿಯಮ ಉಲ್ಲಂಘನೆ ಕಂಡುಬಂದರೆ ಪ್ರಕರಣಗಳನ್ನು ದಾಖಲಿಸಬೇಕು ಮತ್ತು ಅವರನ್ನು ಕನಿಷ್ಠ 10-15 ದಿನಗಳವರೆಗೆ ಜೈಲಿಗೆ ಕಳುಹಿಸಬೇಕು, ಏಕೆಂದರೆ ಅವರು ತಮ್ಮ ಆರೋಗ್ಯಕ್ಕೆ ಮಾತ್ರವಲ್ಲ, ಸುತ್ತಮುತ್ತಲಿನವರಿಗೂ  ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಳೆದ 15 ದಿನಗಳಲ್ಲಿ,  ಹೆಚ್ಚಿನ ಮಾರ್ಷಲ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು, ಆದರೆ ಈಗ ಬಹಳಷ್ಟು ಜನರು ಕೋವಿಡ್-19 ಮಾನದಂಡಗಳನ್ನು ಉಲ್ಲಂಘಿಸಿರುವುದರಿಂದ, ಮಾರ್ಷಲ್‌ಗಳು ಮತ್ತೆ ಕಾರ್ಯರೂಪಕ್ಕೆ ನಿಯೋಜಿಸಲಾಗಿದೆ ಮತ್ತು ದಂಡ ವಿಧಿಸುವತ್ತ ಗಮನಹರಿಸಲು ಕೇಳಿಕೊಳ್ಳಲಾಗಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com