ವಿರೋಧದ ನಡುವೆಯೂ ವೀರ್ ಸಾವರ್ಕರ್ ಯಲಹಂಕ ಮೇಲ್ಸೇತುವೆ ಉದ್ಘಾಟನೆ 

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರ ವಿರೋಧದ ನಡುವೆಯೂ ವೀರ್ ಸಾವರ್ಕರ್ ಯಲಹಂಕ ಮೇಲ್ಸೇತುವೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಿದರು.
ಯಲಹಂಕ ಮೇಲ್ಸೇತುವೆ ಉದ್ಘಾಟನೆ
ಯಲಹಂಕ ಮೇಲ್ಸೇತುವೆ ಉದ್ಘಾಟನೆ

ಯಲಹಂಕ: ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರ ವಿರೋಧದ ನಡುವೆಯೂ ವೀರ್ ಸಾವರ್ಕರ್ ಯಲಹಂಕ ಮೇಲ್ಸೇತುವೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಿದರು.

ಮಂಗಳವಾರ ಬಿಎಸ್‌ವೈ ಬೃಹತ್ ಬೆಂಗಳೂರು ‌ಮಹಾನಗರ ಪಾಲಿಕೆ ವತಿಯಿಂದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಮದರ್ ಡೇರಿ ವೃತ್ತದ ಬಳಿ ನಿರ್ಮಿಸಿರುವ ‘ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಯಲಹಂಕ ಮೇಲ್ಸೇತುವೆ’ಯನ್ನು ಮಂಗಳವಾರ ಬಿಗಿ ಭದ್ರತೆಯೊಂದಿಗೆ ಉದ್ಘಾಟನೆ ಮಾಡಿದರು.  ಯಲಹಂಕ ಮೇಲ್ಸೇತುವೆಗೆ ವೀರ್‌ ಸಾವರ್ಕರ್ ಹೆಸರು ಇಟ್ಟಿರುವುದಕ್ಕೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸಾವರ್ಕರ್‌ ಕನ್ನಡಿಗ ಅಲ್ಲದ ಕಾರಣ ಅವರ ಹೆಸರನ್ನು ಇಡಬಾರದು ಎಂಬುವುದು ಕನ್ನಡ ಪರ ಸಂಘಟನೆಗಳ ವಾದವಾಗಿದೆ. 

ಈ ನಿಟ್ಟಿನಲ್ಲಿ ಉದ್ಘಾಟನೆಯ ದಿನ ಪ್ರತಿಭಟನೆ ಹಮ್ಮಿಕೊಳ್ಳಲು ಕನ್ನಡ ಪರ ಸಂಘಟನೆಗಳು ಮುಂದಾಗಿದ್ದವು. ಈ ಹಿನ್ನೆಲೆಯಲ್ಲಿ ಹಲವು ಹೋರಾಟಗಾರರನ್ನು ಮುಂಜಾಗರೂಕತಾ ಕ್ರಮವಾಗಿ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು, ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ  ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ ರವಿ, ಬೈರತಿ ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಈ ವೇಳೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, 'ನಗರೋತ್ಥಾನ ವಿಶೇಷ ಮೂಲಭೂತ ಸೌಕರ್ಯ ಮತ್ತು ಸರೋವರ ಅಭಿವೃದ್ಧಿ ಯೋಜನೆ’ಯಡಿ ನಗರದ ಸಮಗ್ರ ಅಭಿವೃದ್ಧಿಗಾಗಿ ಪಾಲಿಕೆಗೆ 7300ರೂ ಕೋಟಿ ಅನುದಾನ ಒದಗಿಸಲಾಗಿದ್ದು, ಯೋಜನೆಗಳನ್ನು ಅನುಷ್ಠಾನಗೊಳಿಸಲು  ಅನುಮೋದನೆ ನೀಡಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ 30 ಕಿ.ಮೀ ಉದ್ದದ 36 ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ನಗರೋತ್ಥಾನ ಯೋಜನೆಯಡಿ ಯಲಹಂಕ ಕ್ಷೇತ್ರದ ಅಭಿವೃದ್ಧಿಗೆ 400ರೂ ಕೋಟಿ ಅನುದಾನ ನೀಡಲಾಗಿದೆ’ ಎಂದು ಹೇಳಿದರು. 

ಇದೇ ವೇಳೆ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ದೇಶಭಕ್ತಿ ಎಲ್ಲೆಡೆ ಮೂಡಬೇಕು ಎಂಬ ಉದ್ದೇಶದಿಂದ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನಿಡಲಾಗಿದೆ. ಇದನ್ನು ವಿರೋಧಿಸುವವರು ಸಾವರ್ಕರ್ ಅವರ ಜೀವನಚರಿತ್ರೆ ಓದಬೇಕು. ಯಲಹಂಕದಲ್ಲಿ ಇದೇ ಮಾದರಿಯಲ್ಲಿ ಇನ್ನೂ 4  ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು‘ ಎಂದು ತಿಳಿಸಿದರು.

ಜೆಡಿಎಸ್ ತೀವ್ರ ವಿರೋಧ
ಇನ್ನು ಹೋರಾಟಗಾರರನ್ನು ಬಂಧಿಸಿ ಮೇಲ್ಸೇತುವೆ ಉದ್ಘಾಟನೆ ಮಾಡಿರುವುದಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್, 'ಬೆಂಗಳೂರು ಜೆಡಿಎಸ್ ಯುವಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಪ್ರತಿಭಟನೆಯ ಭಯದಿಂದ ಸರ್ಕಾರ  ಬಂಧಿಸಿದ್ದು, ಯಲಹಂಕ ಮೇಲ್ಸೇತುವೆಗೆ ಮಹಾರಾಷ್ಟ್ರದ ಸಾವರ್ಕರ್ ಹೆಸರಿಡುವುದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡದ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಇದು ಜನವಿರೋಧಿ ಸರ್ಕಾರದ ಭಂಡ ನಡೆ ಎಂದು ಕಿಡಿಕಾರಿದೆ.

ಇದೇ ವೇಳೆ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯಲಹಂಕ ಮೇಲ್ಸೇತುವೆಗೆ ವಿಚಾರದಲ್ಲಿ ಮಂಗಳವಾರ ಬೆಳಗ್ಗೆ ನನ್ನ ಮನೆಯಲ್ಲಿ ಪೋಲೀಸರು ನನ್ನನ್ನು ಬಂಧಿಸಿದ್ದಾರೆ. ಎಂದು ಅವರು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ. 

ಇನ್ನು ಸರ್ಕಾರದ ನಡೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ಯಲಹಂಕದ ಮೇಲ್ಸೇತುವೆಗೆ ಹೆಸರಿಡುವ ವಿಚಾರದಲ್ಲಿ ಕರ್ನಾಟಕದ ಜನತೆಯಿಂದ ಗಂಭೀರವಾದ, ಸಕಾರಣವಾದ ವಿರೋಧ ಇದ್ದರೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸರ್ಕಾರ ಆ  ಜನಾಭಿಪ್ರಾಯವನ್ನು ಕಡೆಗಣಿಸಿ ಮುಂದುವರೆಯುತ್ತಿರುವುದು ಅಕ್ಷಮ್ಯ. ಕನ್ನಡಿಗರ ಭಾವನೆಗಳಿಗೆ ಬೆಲೆ ನೀಡದ ಸರ್ಕಾರದ ನಡೆಯನ್ನು ಖಂಡಿಸುತ್ತದೆ. ಹೇರಿಕೆ ಸಲ್ಲದು. ಒಪ್ಪಿತ ಹೆಸರು ಇಡಿ ಎಂದು ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com