ಗುಣಮುಖ ಮಹಿಳೆಗೆ ಮತ್ತೆ ಕೊರೋನಾ ಸೋಂಕು: ವರದಿ ಕೇಳಿದ ಆರೋಗ್ಯ ಇಲಾಖೆ

ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದ ಮಹಿಳೆಗೆ ಮತ್ತೆ ಸೋಂಕು ಒಕ್ಕರಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅಧಿಕಾರಿಗಳಿಂದ ವರದಿ ಕೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದ ಮಹಿಳೆಗೆ ಮತ್ತೆ ಸೋಂಕು ಒಕ್ಕರಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅಧಿಕಾರಿಗಳಿಂದ ವರದಿ ಕೇಳಿದೆ.

ಬನ್ನೇರುಘಟ್ಟದ ಫೋರ್ಟೀಸ್ ಆಸ್ಪತ್ರೆಯಲ್ಲಿ ಈ ಪ್ರಕರಣ ವರದಿಯಾಗಿದ್ದು, ಈ ಹಿಂದೆ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ 27 ವರ್ಷದ ಮಹಿಳೆಗೆ ಮತ್ತೆ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಫೋರ್ಟೀಸ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗ ಹಿರಿಯ ವೈದ್ಯ ಡಾ. ಪ್ರತೀಕ್ ಪಾಟಿಲ್ ಅವರು ಮಾಹಿತಿ  ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜವೈದ್ ಅಖ್ತರ್ ಅವರು ಮಂಗಳವಾರ ಮಧ್ಯಾಹ್ನ ಈ ಬಗ್ಗೆ ಚರ್ಚೆ ನಡೆಸಿದರು. ನಾವು ಮರು ಪರಿಶೀಲಿಸಿದ ಮಹಿಳೆಯ ಎಲ್ಲಾ ಪರೀಕ್ಷಾ ವರದಿಗಳು ಮತ್ತು ಪ್ರಕರಣದ ವಿವರಗಳನ್ನು ಅವರಿಗೆ ಕಳುಹಿಸಿದ್ದೇವೆ. ಅವರು  ಪ್ರಕರಣವನ್ನು ವಿವರವಾಗಿ ಪರಿಶೀಲಿಸುತ್ತಾರೆ. ನಾವು ಹೆಚ್ಚಿನ ಅಧ್ಯಯನ ಮಾಡಬಹುದೇ ಎಂದು ನಾನು ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯನ್ನು ಕೇಳಿದ್ದೇನೆ, ಅವರಿಂದ ಉತ್ತರಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ನಿಮ್ಹ್ಯಾನ್ಸ್‌ನ ನ್ಯೂರೋವೈರಾಲಜಿ ವಿಭಾಗದ ಮುಖ್ಯಸ್ಥ ಡಾ. ವಿ ರವಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮೊದಲು ಸೋಂಕಿತ ವ್ಯಕ್ತಿ ನಿಜಕ್ಕೂ ಗುಣಮುಖರಾಗಿ ಬಳಿಕ ಸೋಂಕಿಗೆ ತುತ್ತಾಗಿದ್ದಾರೆಯೇ ಎಂಬುದನ್ನು ನಾವು ಮೊದಲು ಖಚಿತಪಡಿಸಿಕೊಳ್ಳಬೇಕು. ಸೋಂಕಿತ ವ್ಯಕ್ತಿಯ ಹಳೆಯ ಮಾದರಿ ಪರೀಕ್ಷಾ  ವರದಿಗಳನ್ನು ಪುನರ್ ಪರಿಶೀಲಿಸಬೇಕು. ಮೊದಲು ಮತ್ತು ನಂತರ ಪತ್ತೆಯಾದ ಎಲ್ಲಾ ರೋಗಲಕ್ಷಣಗಳ ಕ್ಲಿನಿಕಲ್ ಟಿಪ್ಪಣಿಗಳು ಮತ್ತು ಪರೀಕ್ಷಾ ಫಲಿತಾಂಶಗಳನ್ನು ಅಧ್ಯಯನ ಮಾಡಬೇಕಾಗುತ್ತದೆ ಎಂದು ಹೇಳಿದರು. 

ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚಿದಾನಂದ್ ಅವರು ಮಾತನಾಡಿ, ಮರು ಸೋಂಕಿಗೆ ಕಾರಣ ಮತ್ತು ರೋಗಿಯ ವಿವರಗಳನ್ನು ಪರಿಶೀಲಿಸಬೇಕು. ಆ ಬಳಿಕವಷ್ಟೇ ನಾವು ಒಂದು ತೀರ್ಮಾನಕ್ಕೆ ಬರಬಹುದು. ಇಂತಹ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿದ್ದು, ಈ  ಬಗ್ಗೆ ಸುಧೀರ್ಘ ಅಧ್ಯಯನ ನಡೆಯಬೇಕಿದೆ ಎಂದು ಹೇಳಿದ್ದಾರೆ. 

ಕೊರೊನಾವೈರಸ್ ಮರು ಸೋಂಕು ಪ್ರಕರಣಗಳ ಬಗ್ಗೆ ವೈದ್ಯಕೀಯ ಅಧ್ಯಯನ ನಡೆಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೋಮವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಬ್ಬ ವ್ಯಕ್ತಿಯು ಕೋವಿಡ್‌ನಿಂದ ಚೇತರಿಸಿಕೊಂಡಾಗ, ಬಿಳಿ ರಕ್ತ ಕಣಗಳನ್ನು ಉತ್ಪಾದಿಸಲು ಕನಿಷ್ಠ 15 ದಿನಗಳು  ಬೇಕಾಗುತ್ತದೆ, ಮತ್ತು ಈ ನಡುವಿನ ಸಮಯದಲ್ಲಿ ರೋಗಿಯು ಸೋಂಕಿಗೆ ಒಳಗಾಗಬಹುದು ಎಂದು ಕಾರ್ಯಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಮರು ಸೋಂಕು ಪ್ರಕರಣಗಳ ಬಗ್ಗೆ ಸ್ಪಷ್ಟನೆ ಮತ್ತು ವಿವರ ನೀಡುವಂತೆ ಸಚಿವರು ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಇತರೆ ರಾಜ್ಯಗಳಲ್ಲೂ ಇಂತಹ  ಪ್ರಕರಣಗಳು ಕಂಡುಬಂದಿದ್ದು, ನಿಜಕ್ಕೂ ಕೋವಿಡ್ ನಿಂದ ಗುಣಮುಖರಾದ ಸೋಂಕಿತರು ಸರ್ಕಾರದ ಮಾರ್ಗಸೂಚಿಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com