ಮೈಸೂರು: ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿ ಕೊರೋನಾ ಭೀತಿ, ಮೂರು ವಿದ್ಯಾರ್ಥಿಗಳಲ್ಲಿ ಸೋಂಕು ದೃಢ!

ಮೈಸೂರು ವಿಶ್ವವಿದ್ಯಾಲಯದ ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆಯೇ ಇತ್ತ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯಕ್ಕಿಂತ ಕೊರೋನಾ ಸೋಂಕಿನ ಭೀತಿ ಹೆಚ್ಚಾಗಿದೆ.
ಮಾನಸ ಗಂಗೋತ್ರಿ ಕ್ಯಾಂಪಸ್
ಮಾನಸ ಗಂಗೋತ್ರಿ ಕ್ಯಾಂಪಸ್

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆಯೇ ಇತ್ತ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯಕ್ಕಿಂತ ಕೊರೋನಾ ಸೋಂಕಿನ ಭೀತಿ ಹೆಚ್ಚಾಗಿದೆ.

ಹೌದು.. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಕ್ಯಾಂಪಸ್ ನ ಹಾಸ್ಟೆಲ್ ನಲ್ಲಿನ ಮೂವರು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ದೃಢವಾಗಿದ್ದು, ಈ ವಿಚಾರ ಇಡೀ ವಿಶ್ವವಿದ್ಯಾಲಯದ ಆವರಣದಲ್ಲಿ ಆಂತಕದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಸೋಂಕಿತ ವಿದ್ಯಾರ್ಥಿಗಳ ಪೈಕಿ ಇಬ್ಬರು  ಮಹಿಳಾ ಹಾಸ್ಟೆಲ್ ನಲ್ಲಿ ತಂಗಿದ್ದ ವಿದ್ಯಾರ್ಥಿಗಳಾಗಿದ್ದು, ಪ್ರಸ್ತುತ ಅವರನ್ನು ಸರ್ಕಾರಿ ಕೋವಿಡ್ ಕೇರ್ ಸೆಂಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ತಿಂಗಳ ಕೊರೋನಾ ವೈರಸ್ ಲಾಕ್ ಡೌನಾ ಬಳಿಕ ಇತ್ತೀಚೆಗಷ್ಟೇ ವಿದ್ಯಾರ್ಥಿಗಳು ಕ್ಯಾಂಪಸ್ ಗೆ ವಾಪಸ್ ಆಗಿದ್ದರು. 

ಅತ್ತ ಹಾಸ್ಟೆಲ್ ನಲ್ಲಿ ಸೋಂಕಿತರ ಪತ್ತೆಯಾಗುತ್ತಿದ್ದಂತೆಯೇ ಇತ್ತ ಕ್ಯಾಂಪಸ್ ನಲ್ಲಿನ ಇತರೆ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಪ್ರತ್ಯೇಕವಾಗಿರಿಸಿಲ್ಲ. ಹಾಸ್ಟೆಲ್ ನ ಕಿಚನ್, ಡೈನಿಂಗ್ ಹಾಲ್, ಬಾತ್ ರೂಂ ಗಳು ಎಲ್ಲವೂ ಎಲ್ಲರಿಗೂ  ಮುಕ್ತವಾಗಿದೆ. ಇದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ. ಕ್ಯಾಂಪಸ್ ನಲ್ಲಿ ಯಾವುದೇ ರೀತಿಯ ಸಾಮಾಜಿಕ ಅಂತರದ ಪಾಲನೆಯಾಗುತ್ತಿಲ್ಲ. ಕನಿಷ್ಠ ಪಕ್ಷ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟಸರ್, ಹ್ಯಾಂಡ್ ವಾಶ್ ಗಳನ್ನೂ ನೀಡಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿವಿಯ ಸಂಶೋಧನಾ ತಜ್ಞ ಮಹೇಶ್ ಸೊಸಲೆ ಅವರು, ಕ್ಯಾಂಪಸ್ ನಲ್ಲಿ ಅಧಿಕಾರಿಗಳು ಸಂಪೂರ್ಣ ಸುರಕ್ಷತೆಯ ಭರವಸೆ ನೀಡಿದ್ದಾರೆ. ಈ ಸಂಬಂಧ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಸೋಂಕಿತ ವಿದ್ಯಾರ್ಥಿಗಳನ್ನು  ಕರೆದುಕೊಂಡು ಹೋಗಿದ್ದು ಬಿಟ್ಟರೆ ಇನ್ನಾವುದೇ ಬೆಳವಣಿಗೆಗಳು ಇಲ್ಲಿ ಆಗಿಲ್ಲ, ಅಧಿಕಾರಿಗಳು ಹಾಸ್ಟೆಲ್ ಅಥವಾ ಆಯಾ ವಿಭಾಗಗಳಿಗೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳನ್ನು ಪರೀಕ್ಷಿಸಬೇಕು. ಯಾವುದೇ ನಿರ್ಲಕ್ಷ್ಯವು ಕ್ಯಾಂಪಸ್ ಅನ್ನು ಕೋವಿಡ್ ಹಾಟ್‌ಸ್ಪಾಟ್ ಆಗಿ ಪರಿವರ್ತಿಸುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ  ಪ್ರಜ್ಞೆ ಇರಬೇಕು ಎಂದು ಕಿಡಿಕಾರಿದ್ದಾರೆ. 

ಅತ್ತ ವಿದ್ಯಾರ್ಥಿಗಳ ಆಕ್ರೋಶ ಸ್ಫೋಟವಾಗುತ್ತಲೇ ಇತ್ತ ಈ ಬಗ್ಗೆ ಸ್ಪಷ್ಚನೆ ನೀಡಿರುವ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಶಿವಪ್ಪ ಅವರು, 'ಸೋಂಕಿತ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಿಸಿನೀರು ಮತ್ತು ಇತರ ಸೌಲಭ್ಯಗಳ ಜೊತೆಗೆ ವಿದ್ಯಾರ್ಥಿಗಳಿಗೆ  ಒಂದೇ ಕೊಠಡಿಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಕೆಲವು ಹಿರಿಯ ಶಿಕ್ಷಕರು ಸಹ ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆನ್‌ಲೈನ್ ತರಗತಿಗಳು ಮತ್ತು ಪರೀಕ್ಷೆಗಳು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರುವ ಏಕೈಕ ಮಾರ್ಗವಾಗಿದೆ ಎಂದು  ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com