ಡ್ರಗ್ಸ್ ದಂಧೆ ಕೇಸಿಗೆ ಇಡಿ ಪ್ರವೇಶ: ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ

ದೇಶದಾದ್ಯಂತ ಸಂಚಲನ ಹುಟ್ಟಿಸಿರುವ ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣದ ತನಿಖೆಗೆ ಇದೀಗ ಜಾರಿ ನಿರ್ದೇಶನಾಲಯ ಕೂಡ ರಂಗ ಪ್ರವೇಶ ಮಾಡಿದೆ. 
ನಟಿ ಸಂಜನಾ ಹಾಗೂ ರಾಗಿಣಿ
ನಟಿ ಸಂಜನಾ ಹಾಗೂ ರಾಗಿಣಿ

ಬೆಂಗಳೂರು: ದೇಶದಾದ್ಯಂತ ಸಂಚಲನ ಹುಟ್ಟಿಸಿರುವ ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣದ ತನಿಖೆಗೆ ಇದೀಗ ಜಾರಿ ನಿರ್ದೇಶನಾಲಯ ಕೂಡ ರಂಗ ಪ್ರವೇಶ ಮಾಡಿದೆ. 

ಈ ಡ್ರಗ್ಸ್ ಜಾಲದ ಆರೋಪಿಗಳ ಕೇವಲ ಮಾದಕ ವಸ್ತು ಸಾಗಾಟ ಮಾತ್ರವಲ್ಲದೆ, ಅಕ್ರಮ ಹಣ ವರ್ಗಾವಣೆ, ವಿದೇಶದಲ್ಲಿ ಹಣಕಾಸು ವ್ಯವಹಾರ ಹಾಗೂ ಹವಾಲಾ ಚಟುವಟಿಕೆಯಲ್ಲೂ ಭಾಗಿಯಾದ ಶಂಕೆಗಳು ಮೂಡಿರುವ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಇಕಾರಿಗಳು ತನಿಖೆಗೆ ಪ್ರವೇಶಿಸಿದ್ದು, ಹಾಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿಗಳಿಂದ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. 

ಈ ಮೂಲಕ ಮಾದಕ ವಸ್ತು ಮಾರಾಟ ಜಾಲ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಬಲೆಗೆ ಬಿದ್ದಿರುವ ಕನ್ನಡ ಸಿನಿಮಾ ರಂಗದ ತಾರೆಯಲು ಹಾಗೂ ಪೇಜ್ ತ್ರಿ ಪಾರ್ಟಿಗಳ ಆಯೋಜಕರಿಗೆ ಮತ್ತೊಂದು ಕಂಟಕ ಶುರುವಾದಂತಾಗಿದೆ. ಇಡಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ಬುಧವಾರ ತೆರಳಿ ತನಿಖಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. 

ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವೀರೇನ್ ಖನ್ನಾ, ರಾಹುಲ್, ಪ್ರಶಾಂತ್ ರಂಕಾ, ನಿಯಾಜ್, ಸಾರಿಗೆ ಇಲಾಖೆ ನೌಕರ ರವಿಶಂಕರ್ ಅವರನ್ನು ವಿಚಾರಣೆಗೊಳಪಡಿಸುವ ಉದ್ದೇಶವನ್ನು ಇಡಿ ಅಧಿಕಾರಿಗಳು ಹೊಂದಿದ್ದಾರೆನ್ನಲಾಗಿದೆ. ಹೀಗಾಗಿ ಸಿಸಿಬಿ ಬಂಧಿಸಿರುವ ಆರೋಪಿಗಳ ಸಂಬಂಧ ಪ್ರಾಥಮಿಕ ಹಂತದಲ್ಲಿ ತನಿಖಾಧಿಕಾರಿಗಳಿಂದ ಇಡಿ ಮಾಹಿತಿ ಪಡೆದಿದೆ. ಮಾದಕ ವಸ್ತು ಜಾಲ ಪ್ರಕರಣದ ಸಿಸಿಬಿ ವಿಚಾರಣೆ ಮುಗಿದ ನಂತರ ಇಡಿ ಅಧಿಕಾರಿಗಳು ಅಕ್ರಮ ಹಣಕಾಸು ವ್ಯವಹಾರ ಸಂಬಂಧ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಿದ್ದಾರೆನ್ನಲಾಗಿದೆ. 

ನಟಿ ರಾಗಿಣಿ, ಸಂಜನಾಗೆ ಶುರುವಾಯ್ತು ಆರೋಗ್ಯ ಸಮಸ್ಯೆ
ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಸಂಜನಾ ಹಾಗೂ ರಾಗಿಣಿ ಇಬ್ಬರಿಗೂ ಆರೋಗ್ಯ ಸಮಸ್ಯೆಗಳು ಶುರುವಾಗಿದ್ದು, ಚಿಕಿತ್ಸೆಗಾಗಿ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. 

ಚಿಕಿತ್ಸೆ ಪೂರ್ಣಗೊಂಡ ಬಳಿಕ ಇಬ್ಬರನ್ನೂ ಪೊಲೀಸರು ಮತ್ತೊಮ್ಮೆ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ. ಶುಕ್ರವಾರ ರಾಗಿಣಿಯವರ ಪೊಲೀಸರ ವಶ ಪೂರ್ಣಗೊಳ್ಳಲಿದ್ದು, ಮತ್ತೊಮ್ಮೆ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಶುಕ್ರವಾರದ ಬಳಿಕ ನಟಿ ರಾಗಿಣಿಯವರು ಜಾಮೀನು ಕೋರಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com