ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ರಾಜ್ಯದ ಪರಿಸ್ಥಿತಿ ಉತ್ತಮವಾಗಿದೆ: ಸಂದರ್ಶನದಲ್ಲಿ ಸಚಿವ ಸುಧಾಕರ್ 

ರಾಜ್ಯದಲ್ಲಿ ಮರಣ ಪ್ರಮಾಣವನ್ನು ಶೇ.1ಕ್ಕಿಂತಲೂ ಕಡಿಮೆ ಇರುವಂತೆ ಕ್ರಮ ಕೈಗೊಳ್ಳುವುದು, ಚೇತರಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದರತ್ತ ರಾಜ್ಯ ಸರ್ಕಾರ ಗಮನಹರಿಸಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ, ರಾಜ್ಯದ ಪರಿಸ್ಥಿತಿ ಉತ್ತಮವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ. 
ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಮರಣ ಪ್ರಮಾಣವನ್ನು ಶೇ.1ಕ್ಕಿಂತಲೂ ಕಡಿಮೆ ಇರುವಂತೆ ಕ್ರಮ ಕೈಗೊಳ್ಳುವುದು, ಚೇತರಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದರತ್ತ ರಾಜ್ಯ ಸರ್ಕಾರ ಗಮನಹರಿಸಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ, ರಾಜ್ಯದ ಪರಿಸ್ಥಿತಿ ಉತ್ತಮವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಹಾಗೂ ಮಹಾಮಾರಿ ತೊಲಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ಮನಬಿಚ್ಚಿ ಮಾತನಾಡಿದ್ದಾರೆ. 

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣವೇನು? 
ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿರುವುದರಿಂದ ಹಾಗೂ ಸೋಂಕಿತರ ಸಂಪರ್ಕವನ್ನು ಶೀಘ್ರಗತಿಯಲ್ಲಿ ಪತ್ತೆಹಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ. ಕೊರೋನಾ ವೈರಸ್ ಮಟ್ಟಹಾಕಲು ಜನರು ಹಾಗೂ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಇರಬೇಕು. ಪ್ರಸ್ತುತ ನಮ್ಮ ಬಳಿ ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಮೂರು ತಂತ್ರಗಳಷ್ಟೇ ಇವೆ.  ಇವುಗಳನ್ನು ಜನರು ಪೂರ್ಣಪ್ರಮಾಣದಲ್ಲಿ ಅನುಸರಿಸಿದ್ದೇ ಆದರೆ, ಸೋಂಕನ್ನು ಕಡಿಮೆ ಮಾಡಬಹುದು. ಜನರು ಶಿಸ್ತು ಪಾಲನೆ ಮಾಡಬೇಕು. ಸೋಂಕು ಕಡಿಮೆಯಾಗುತ್ತಿರುವ ಇತರೆ ನಗರಗಳು ಹಾಗೂ ದೇಶಗಳಲ್ಲಿನ ಜನರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ರಾಜ್ಯದಲ್ಲಿ ಪ್ರತೀನಿತ್ಯ 75,000 ಕೊರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹಾಸಿಗೆಗಳ ಹಂಚಿಕೆ ಹಾಗೂ ಶೀಘ್ರಗತಿಯ ಚಿಕಿತ್ಸೆಗಳಿಂದಾಗಿ ಪರಿಸ್ಥಿತಿ ಸುಧಾರಣೆಗೊಳ್ಳುತ್ತಿದೆ. 

ನಿಯಮಗಳನ್ನು ಬಲವಾಗಿ ಜಾರಿಗೆ ತರಲು ಸರ್ಕಾರ ಯಾವ ಯೋಜನೆಗಳನ್ನು ರೂಪಿಸುತ್ತಿದೆ? 
ವೈರಸ್ ಜೊತೆಗೆ ಬದುಕುವುದನ್ನು ನಾವು ಕಲಿಯಬೇಕಿದೆ.  ಜೀವ ಮತ್ತು ಜೀವನೋಪಾಯ ಎರಡನ್ನೂ ಉಳಿಸುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಕೇಂದ್ರ ಸರ್ಕಾರದ ಸೂಚನೆಯಂತೆ, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಕ್ರಮೇಣ ನಿಯಮಗಳನ್ನು ಸಡಿಲಗೊಳಿಸುತ್ತಿದ್ದೇವೆ. ರಸ್ತೆಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ  ಸಾಮಾಜಿಕ ಅಂತಹ ಕಾಯ್ದುಕೊಳ್ಳುವುದು ಹಾಗೂ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ.

ಕೋವಿಡ್ ಹರಡುವಿಕೆಯನ್ನು ತಡೆಯಲು ಸರ್ಕಾರ ಹೊಸ ತಂತ್ರಗಳನ್ನು ರೂಪಿಸಿದೆಯೇ?
ಟ್ರೇಸ್, ಟ್ರ್ಯಾಕ್, ಟೆಸ್ಟ್, ಟ್ರೀಟ್ ಮತ್ತು ಟೆಕ್ನಾಲಜಿಯೆಂಬ ‘5 ಟಿ’ ತಂತ್ರವನ್ನು ಕರ್ನಾಟಕ ಅನುಸರಿಸುತ್ತಿದೆ. ಇದು ಉತ್ತಮ ಫಲಿತಾಂಶವನ್ನು ನೀಡಿದೆ. ಶುಕ್ರವಾರ 12,545 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡ ಬಳಿಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆಯಾಗಿದೆ. ಇಲ್ಲಿಯವರೆಗೆ 3.3 ಲಕ್ಷಕ್ಕೂ ಹೆಚ್ಚು ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ರಾಜ್ಯದಲ್ಲಿ ಚೇತರಿಕೆ ಪ್ರಮಾಣವು ಶೇ.76.06ರಷ್ಟಿದೆ. ಮರಣ ಪ್ರಮಾಣವನ್ನು ಶೇ.1 ಕ್ಕಿಂತ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ. ಪ್ರಸ್ತುತ ರಾಜ್ಯ ಮತ್ತು ಬೆಂಗಳೂರಿನಲ್ಲಿ ಮರಣ ಪ್ರಮಾಣವು 1.60% ಮತ್ತು 1.44% ರಷ್ಟಿದೆ, 

ಇದು ರಾಷ್ಟ್ರೀಯ ಸರಾಸರಿ ಶೇಕಡಾ 1.66 ಕ್ಕಿಂತ ಕಡಿಮೆಯಾಗಿದೆ. ಶುಕ್ರವಾರದವರೆಗೆ ರಾಜ್ಯದಲ್ಲಿ 36 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 129 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿದ್ದು, ಶೀಘ್ರದಲ್ಲೇ ದೈನಂದಿನ ಪರೀಕ್ಷೆಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಏರಿಕೆ ಮಾಡುವ ಗುರಿಯನ್ನು ಹೊಂದಿದ್ದೇವೆ. 

ಬೆಂಗಳೂರಿನಲ್ಲಿ 13,227 ಹಾಸಿಗೆಗಳು ಲಭ್ಯವಿದ್ದು, ಅವುಗಳಲ್ಲಿ ಈಗಾಗಲೇ 8,189 ಹಾಸಿಗೆಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 5,038 (ಶೇ.38) ಹಾಸಿಗೆಗಳು ಖಾಲಿ ಇವೆ. ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ಮತ್ತು ತಗ್ಗಿಸುವಲ್ಲಿ ರಾಜ್ಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಎಲ್ಲಾ ನಿಯತಾಂಕಗಳು ತಿಳಿಸಿವೆ. 

ಬೆಂಗಳೂರಿನಲ್ಲಿ ಗುಣಮುಖರಾದ ವ್ಯಕ್ತಿಯೊಬ್ಬರಿಗೆ ಮರಳಿ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗಿದೆ. ಈ ಸಂಬಂಧ ಪ್ರಾಯೋಗಿಕ ಅಧ್ಯಯನ ನಡೆಸುವಂತೆ ಸೂಚಿಸಿದ್ದಿರಿ. ಅಧ್ಯಯನದ ಪ್ರಾಥಮಿಕ ವರದಿ ಏನನ್ನು ಹೇಳುತ್ತಿದೆ?
ಅಧ್ಯಯನವನ್ನು ರಾಜ್ಯ ತಜ್ಞರ ಸಮಿತಿಯು ನಡೆಸುತ್ತಿದ್ದು, ಶೀಘ್ರದಲ್ಲೇ ಸಂಶೋಧನೆಯ ವರದಿಯನ್ನು ಸಲ್ಲಿಸಲಿದೆ. ಈ ಪ್ರಕರಣವನ್ನು ನಾವು ಇದನ್ನು ವಿಶ್ವದಲ್ಲಿ ಪತ್ತೆಯಾಗಿರುವ ಇತರೆ ಪ್ರಕರಣಗಳೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ. 3 ಲಕ್ಷ ಪ್ರಕರಣಗಳಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಮರು ಸೋಂಕು ತಗುಲಿರುವುದು ಕಂಡು ಬರುತ್ತಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. 

ಶೀಘ್ರದಲ್ಲಿಯೇ ರಾಜ್ಯದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಏಳಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ...? 
ಈ ಬಗ್ಗೆ ನಾನು ಊಹೆಗಳನ್ನು ಮಾಡುವುದಿಲ್ಲ. ಪ್ರಸ್ತುತ ನಮ್ಮ ಗುರಿ ಈಗ ಮರಣ ಪ್ರಮಾಣವನ್ನು ಕಡಿಮೆ ಇಡುವುದಾಗಿದೆ. ಈ ಕುರಿತು ಈಗಾಗಲೇ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರಂಭಿಕ ಹಂತದ ಲಾಕ್ ಡೌನ್ ಸಮಯದಲ್ಲಿ ರಾಜ್ಯವು ಉತ್ತಮವಾಗಿ ನಿರ್ವಹಿಸುತ್ತಿತ್ತು. ಲಾಕ್ ಡೌನ್ ಸಡಿಲಗೊಂಡ ಬಳಿಕ ಸೋಂಕು ಹರಡು ಆರಂಭವಾಗಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಸೋಂಕು ಪ್ರಕರಣಗಳಿಲ್ಲ. ಆದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹರಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ಸೋಂಕು ಹರಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆಯೂ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಳವಾಗಿದೆ. ಆಕ್ಸಿಜನ್ ಪೂರೈಕೆ ಕಡಿಮೆಯಾದ ಕಾರಣ, ನೆರೆರಾಜ್ಯಗಳಿಂದ ಆಕ್ಸಿಜನ್ ಪೂರೈಕೆ ಮಾಡಿಕೊಳ್ಳುವ ಕಾರ್ಯಗಳು ನಡೆಯುತ್ತಿವೆ.

ಅಧ್ಯಯನದ ಪ್ರಕಾರ, ದೇಶದಲ್ಲಿ  ಶೇಕಡಾ 70 ರಷ್ಟು ಜನರು ಕೊರೋನಾ ಸೋಂಕಿಗೊಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದ ಪ್ರಮಾಣ ಎಷ್ಟಿದೆ? ಈ ಬಗ್ಗೆ ಯಾವುದಾದರೂ ಅಧ್ಯಯನ ನಡೆದಿದೆಯೇ?
ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಪ್ರಕರಣಗಳು ಲಕ್ಷಣರಹಿತವಾಗಿವೆ. ಶೇಕಡಾ 0.77 ರಷ್ಟು ಸಕ್ರಿಯ ಪ್ರಕರಣಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭೀತಿಗೊಳಗಾಗುವ ಅಗತ್ಯವಿಲ್ಲ. ನಾವು ಹೆಚ್ಚು ಜಾಗರೂಕರಾಗಿರಬೇಕಿದೆ, ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಜೀವನ ನಡೆಸಬೇಕಿದೆ. 

ಮೈಸೂರು ಮತ್ತು ಬೆಳಗಾವಿಯ ಲಸಿಕೆಗಳ ಕುರಿತು ನಡೆದ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ಹೇಗೆ ಬಂದಿವೆ? ಈ ಬಗ್ಗೆ ಸರ್ಕಾರ ಯಾವ ನಿರ್ಧಾರವನ್ನು ಕೈಗೊಂಡಿದೆ?
ಲಸಿಕೆಗಳನ್ನು ಕಂಡುಹಿಡಿಯುವ ಪ್ರಯತ್ನಗಳು ವಿಭಿನ್ನ ಹಂತಗಳಲ್ಲಿವೆ. ಶೀಘ್ರದಲ್ಲೇ ಲಸಿಕೆ ಕಂಡುಹಿಡಿಯುವ ಭರವಸೆಗಳಿವೆ. ಕ್ಲಿನಿಕಲ್ ಪ್ರಯೋಗಗಳು ಅಂತ್ಯಗೊಂಡ ಬಳಿಕ ಸರ್ಕಾರವು ಎಲ್ಲರಿಗೂ ಲಸಿಕೆಗಳನ್ನು ನೀಡಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com