ರಾಜ್ಯದಲ್ಲೂ 'ನೀಟ್‌' ಯಶಸ್ವಿ: ಪರೀಕ್ಷೆ ಬರದೆ 1.2 ಲಕ್ಷ ವಿದ್ಯಾರ್ಥಿಗಳು

ನಿನ್ನೆ ದೇಶಾದ್ಯಂತ ನಡೆದ ನೀಟ್ ಪರೀಕ್ಷೆ ರಾಜ್ಯದಲ್ಲೂ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಸುಮಾರು 1.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ನೀಟ್ ಪರೀಕ್ಷೆ
ನೀಟ್ ಪರೀಕ್ಷೆ

ಬೆಂಗಳೂರು: ನಿನ್ನೆ ದೇಶಾದ್ಯಂತ ನಡೆದ ನೀಟ್ ಪರೀಕ್ಷೆ ರಾಜ್ಯದಲ್ಲೂ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಸುಮಾರು 1.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

2020–21ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ರಾಜ್ಯದಲ್ಲೂ ಯಶಸ್ವಿಯಾಗಿ ನಡೆಯಿತು. ಕೋವಿಡ್‌ 19ರ ಕಾರಣದಿಂದ ಪರೀಕ್ಷೆಯಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.  ಪರಸ್ಪರ ಅಂತರ ಕಾಯ್ದುಕೊಳ್ಳಲು ಒತ್ತು ನೀಡಿದ್ದ ವಿದ್ಯಾರ್ಥಿಗಳು ಮುಂಜಾಗ್ರತೆಯಾಗಿ ಮಾಸ್ಕ್ ಧರಿಸಿದ್ದರು. ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಯನ್ನು ಥರ್ಮಲ್ ಸ್ಕ್ಯಾನ್ ಮಾಡಿ, ಸ್ಯಾನಿಟೈಸರ್ ನೀಡಿ ಕೇಂದ್ರಗಳ ಒಳಗೆ ಬಿಡಲಾಯಿತು. ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ  ಪ್ರವೇಶವನ್ನು ಬೆಳಿಗ್ಗೆ 11ರಿಂದಲೇ ನೀಡಲಾಯಿತು. ವಿದ್ಯಾರ್ಥಿಗಳಿಗೆ ಕೇಂದ್ರ ಪ್ರವೇಶಿಸಲು ಪ್ರತ್ಯೇಕ ಸಮಯ ನಿಗದಿಪಡಿಸಲಾಗಿತ್ತು. 

ದೇಶದಾದ್ಯಂತ ಸುಮಾರು 15 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ ರಾಜ್ಯದಲ್ಲಿ 1,19,597 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಮೊದಲು ಎರಡು ಬಾರಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಜುಲೈ 26 ಮತ್ತು ಸೆಪ್ಟೆಂಬರ್ 26ರಂದು ಪರೀಕ್ಷೆ ಮುಂದೂಡಲಾಗಿತ್ತು. 

ಬೆಂಗಳೂರು, ಕಲಬುರ್ಗಿ, ದಾವಣಗೆರೆ, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಮತ್ತು ಉಡುಪಿಯಲ್ಲಿ ಒಟ್ಟು 298 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷಾ ನಿಯಮದಂತೆ ವಿದ್ಯಾರ್ಥಿಗಳು ಸರಳ ಉಡುಗೆಯಲ್ಲಿ ಹಾಜರಾದರು. ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ  ನಿಗದಿಯಾಗಿದ್ದರೂ, ಬೆಳಿಗ್ಗೆ 11 ಗಂಟೆಗೆ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಪರೀಕ್ಷಾ ಕೇಂದ್ರದ ಬಳಿ ಹಾಜರಿದ್ದರು. 

ಕೋವಿಡ್ ನಿಂದಾಗಿ ಹೆಚ್ಚಿನ ಮುಂಜಾಗ್ರತೆ
ಕೊರೋನಾ ಸೋಂಕು ಸಾಂಕ್ರಾಮಿಕದಿಂದಾಗಿ ಈ ಬಾರಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿತ್ತು. ವಿದ್ಯಾರ್ಥಿಗಳು ಸರಳವಾದ ಉಡುಪು ಧರಿಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು. ಕಾಲಿಗೆ ಚಪ್ಪಲಿ, ಸ್ಯಾಂಡಲ್ಸ್ ಹಾಗೂ ಲೋ ಹೀಲ್ಡ್ ಚಪ್ಪಲಿ ಮಾತ್ರ  ಧರಿಸಿರಬೇಕು. ಶೂ ಧರಿಸುವುದು, ತುಂಬು ತೋಳಿನ ಅಂಗಿ, ಕಿವಿ ಓಲೆ, ವಾಚ್, ಬೆಲ್ಟ್‌ ನಿಷೇಧಿಸಲಾಗಿತ್ತು. ಮಾಸ್ಕ್‌ ಮತ್ತು ಕೈಗವಸು ಕಡ್ಡಾಯಗೊಳಿಸಲಾಗಿತ್ತು. ಆದರೆ, ಪಾರದರ್ಶಕ ಬಾಟಲಿಯಲ್ಲಿ ನೀರು, 50 ಮಿ. ಲೀ. ಸ್ಯಾನಿಟೈಸರ್ ತರಲು ಅವಕಾಶ ನೀಡಲಾಗಿತ್ತು. ಆದರೂ, ಪ್ರವೇಶ ಮತ್ತು ನಿರ್ಗಮನದ  ವೇಳೆ ಅಂತರ ಕಾಯ್ದುಕೊಳ್ಳದಿದ್ದುದು ಅಲ್ಲಲ್ಲಿ ಕಂಡುಬಂತು. 

'ನಿಗದಿಪಡಿಸಿದ ಸಮಯಕ್ಕಿಂತ ಮೊದಲೇ ಕೇಂದ್ರಕ್ಕೆ ತಲುಪಿದ್ದರೂ ಕೋವಿಡ್‌ ಪರೀಕ್ಷೆಗಾಗಿ ಸುಮಾರು 45 ನಿಮಿಷ ಸರದಿಯಲ್ಲಿ ನಿಲ್ಲಬೇಕಾಯಿತು' ಎಂದು ಬೆಂಗಳೂರಿನ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ ಹೇಳಿದರು. 'ಭೌತ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯದ ಪತ್ರಿಕೆಗಳು ಸ್ವಲ್ಪ ಕಷ್ಟವಿತ್ತು'  ಎಂದು ಕೆಲವು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆ-ಸಿಇಟಿ) ಗಿಂತ ನೀಟ್ ಪರೀಕ್ಷೆ ವ್ಯವಸ್ಥೆ ಉತ್ತಮವಾಗಿವೆ ಮತ್ತು ಪತ್ರಿಕೆಗಳು ಸುಲಭವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಭೌತಶಾಸ್ತ್ರದ ಕಾಗದವು ಸುಲಭವಾಗಿದ್ದರೆ, ರಸಾಯನಶಾಸ್ತ್ರ ಸ್ವಲ್ಪ ಕಠಿಣವಾಗಿತ್ತು ಎಂದು ವಿದ್ಯಾರ್ಥಿ ಆರ್ಯನ್ ಮಹಾಲಿಂಗಪ್ಪ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com