ಡ್ರಗ್ಸ್ ಪ್ರಕರಣ: ಆತ ಮನೆಗೆ ಬಂದರೆ ಖಂಡಿತಾ ಪೊಲೀಸರಿಗೆ ಶರಣಾಗುವಂತೆ ಮಾಡುತ್ತೇವೆ: ಆರೋಪಿ ಶೇಖ್ ಫೈಸಲ್ ಕುಟುಂಬ

ಕರ್ನಾಟಕದಲ್ಲಿ ಕೊರೋನಾ ವೈರಸ್ ಗಿಂತಲೂ ಹೆಚ್ಚು ಸುದ್ದಿ ಮಾಡುತ್ತಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶೇಖ್ ಫೈಸಲ್ ನ ಬಂಧನಕ್ಕೆ ಸಿಸಿಬಿ ಬಲೆ ಬೀಸಿರುವಂತೆಯೇ ಆತನ ಕುಟುಂಬಸ್ಥರು ಆತ ಸಿಕ್ಕರೆ ಶರಣಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿಸಿಬಿ ಪೊಲೀಸ್ ಕಚೇರಿ
ಸಿಸಿಬಿ ಪೊಲೀಸ್ ಕಚೇರಿ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ಗಿಂತಲೂ ಹೆಚ್ಚು ಸುದ್ದಿ ಮಾಡುತ್ತಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶೇಖ್ ಫೈಸಲ್ ನ ಬಂಧನಕ್ಕೆ ಸಿಸಿಬಿ ಬಲೆ ಬೀಸಿರುವಂತೆಯೇ ಆತನ ಕುಟುಂಬಸ್ಥರು ಆತ ಸಿಕ್ಕರೆ ಶರಣಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇಬ್ಬರು ನಟಿಯರು ಸೇರಿದಂತೆ ಈಗಾಗಲೇ ಸಾಕಷ್ಟು ಮಂದಿಯನ್ನು ಬಂಧಿಸಿದ್ದು, ಈ ಪೈಕಿ ಇಡೀ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಶಂಕಿತ ಡ್ರಗ್ ಡೀಲರ್ ಶೇಖ್ ಫೈಸಲ್ ಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೇಖ್ ಫೈಸಲ್ ಹೇಳಿಕೊಂಡಿರುವಂತೆ ಆತ ಪ್ರಭಾವಿ ಶಾಸಕರೋರ್ವರ ಅತ್ಯಾಪ್ತನಾಗಿದ್ದು. ಈತನ ಬಂಧನಕ್ಕಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 

ಮೂಲಗಳ ಪ್ರಕಾರ ಆತನ ಬಂಧನಕ್ಕಾಗಿ ಆತನ ಕುಟುಂಬಸ್ಥರನ್ನು ಅಧಿಕಾರಿಗಳು ಸಂಪರ್ಕಿಸಿದ್ದು, ಈ ವೇಳೆ ಆತನ ಕುಟುಂಬಸ್ಥರು ಆತನ ಶೋಧಕಾರ್ಯಾಚರಣೆಯನ್ನು ನಿಲ್ಲಿಸಿ. ಆತನನ್ನು ನಾವು ಮನವೊಲಿಸಿ ಶರಣಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಂತೆಯೇ ಅಧಿಕಾರಿಗಳು ಒಂದು  ವೇಳೆ ಆತ ಪರಾರಿಯಾಗಲು ಯತ್ನಿಸಿದರೆ ಅಥವಾ ಪರಾರಿಯಾದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿತೆ ನೀಡಿದ್ದಾರೆ ಎನ್ನಲಾಗಿದೆ. 

ಪೊಲೀಸ್ ಮೂಲಗಳ ಪ್ರಕಾರ 15 ವರ್ಷಗಳ ಹಿಂದೆ ಫೈಸಲ್ ಚಾಮರಾಜಪೇಟೆಯಲ್ಲಿ ಮೆಕಾನಿಕ್ ಆಗಿದ್ದ. ಬಳಿಕ ಡ್ರಗ್ಸ್ ಡೀಲಿಂಗ್ ನಲ್ಲಿ ಪಳಗಿದ ಈತ ಕ್ರಮೇಣ ಖ್ಯಾತನಾಮರೊಂದಿಗೆ ಗುರುತಿಸಿಕೊಳ್ಳಲಾರಂಭಿಸಿದ. ಕರ್ನಾಟಕದ ರಾಜಕಾರಣಿಗಳು, ಕನ್ನಡ ಸಿನಿಮಾ ರಂಗ, ಬಾಲಿವುಡ್ ಸೇರಿದಂತೆ ಎಲ್ಲರ ಜೊತೆ  ಈ ಶೇಕ್ ಫೈಜಲ್​ಗೆ ಲಿಂಕ್ ಇದೆ ಎಂದು ಆರೋಪಿಸಲಾಗಿದೆ. ಮಾಧ್ಯಮವೊಂದರ ವರದಿ ಅನ್ವಯ ನಟಿ ಸಂಜನಾರನ್ನು ಶ್ರೀಲಂಕಾ ಕಸಿನೊಗೆ ಕರೆದುಕೊಂಡು ಹೋಗಿದ್ದು ಈತನೇ ಎಂದು ಹೇಳಲಾಗಿದೆ. ಈತ ಬಿಟಿಎಂ ಲೇಔಟ್ ನಿವಾಸಿಯಾಗಿದ್ದು, ಶ್ರೀಲಂಕಾದ ಬೇಲಿಸ್ ಕಸಿನೊದಲ್ಲಿ ಏಜೆಂಟ್ ಆಗಿದ್ದ ಎಂದು  ಹೇಳಲಾಗಿದೆ. ಕಳೆದ ಹಲವು ವರ್ಷಗಳಿಂದ ರಾಹುಲ್ ಮತ್ತು ಶೇಕ್ ಫೈಜಲ್ ಒಟ್ಟಿಗೆ ವ್ಯವಹಾರ ನಡೆಸುತಿದ್ದರು. ಹೀಗಾಗಿ ಸಿಸಿಬಿ ಶೇಕ್ ಫೈಜಲ್ ಹುಡುಕಾಟಕ್ಕೆ ವಿಶೇಷ ತಂಡ ರಚಿಸಿದೆ. ಶೇಕ್ ಫೈಜಲ್ ಸಿಕ್ಕಿಬಿದ್ದರೆ ರಾಜಕಾರಣಿಗಳ ಇಂಟರ್ನ್ಯಾಷನಲ್ ನಂಟು, ಹಣದ ವ್ಯವಹಾರ, ಡ್ರಗ್ಸ್ ಸಾಗಾಟ, ಹವಾಲ  ಎಲ್ಲವೂ ಬಯಲಾಗುವ ಸಾಧ್ಯತೆ ಇದೆ.
 
ಇನ್ನು ಶನಿವಾರ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರೂ ಕೂಡ ಈ ಹಿಂದೆ ಫೈಸಲ್ ಹೆಸರು ಹೇಳಿ ಆತನ ಬಂಧನವಾದರೆ ಪ್ರಕರಣದಲ್ಲಿರುವ ಇತರೆ ಗಣ್ಯರ ಹೆಸರೂ ಕೂಡ ಬಯಲಿಗೆ ಬರಲಿದೆ. ಈ ಫೈಸಲ್ ಶಾಸಕ ಜಮೀರ್ ಅಹ್ಮದ್ ಖಾನ್ ಗೂ ಪರಮಾಪ್ತ  ಎಂದೂ ಸಂಬರಗಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com