ಬಿಬಿಎಂಪಿ ಚುನಾವಣೆ: 4 ಮಾಜಿ ಮೇಯರ್ ಗಳಿಗೆ ತಾವು ಗೆದ್ದಿದ್ದ ವಾರ್ಡ್ ನಲ್ಲೇ ಮತ್ತೆ ಸ್ಪರ್ಧೆಗಿಲ್ಲ ಅವಕಾಶ?

ಬಿಬಿಎಂಪಿ ಚುನಾವಣೆ ನಿಮಿತ್ತ ವಾರ್ಡ್‌ವಾರು ಮೀಸಲಾತಿ ಪಟ್ಟಿಯ ಕರಡನ್ನು ನಗರಾಭಿವೃದ್ಧಿ ಇಲಾಖೆ ಸೋಮವಾರ ಬಿಡುಗಡೆ ಮಾಡಿದ್ದು, ನಾಲ್ವರು ಮೇಯರ್‌ಗಳು ಹಾಗೂ ಕಾಂಗ್ರೆಸ್‌ ಪಕ್ಷದ ಪ್ರಮುಖ ಪಾಲಿಕೆ ಸದಸ್ಯರಿಗೆ ಈ ಹಿಂದೆ ಪ್ರತಿನಿಧಿಸಿದ್ದ ವಾರ್ಡ್‌ನಲ್ಲಿ ಮತ್ತೆ ಸ್ಪರ್ಧೆಗೆ ಅವಕಾಶ ಸಿಗದಂತಾಗಿದೆ.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಬಿಬಿಎಂಪಿ ಚುನಾವಣೆ ನಿಮಿತ್ತ ವಾರ್ಡ್‌ವಾರು ಮೀಸಲಾತಿ ಪಟ್ಟಿಯ ಕರಡನ್ನು ನಗರಾಭಿವೃದ್ಧಿ ಇಲಾಖೆ ಸೋಮವಾರ ಬಿಡುಗಡೆ ಮಾಡಿದ್ದು, ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಆಡಳಿತಾವಧಿಯ ನಾಲ್ವರು ಮೇಯರ್‌ಗಳು ಹಾಗೂ ಕಾಂಗ್ರೆಸ್‌ ಪಕ್ಷದ ಪ್ರಮುಖ ಪಾಲಿಕೆ  ಸದಸ್ಯರಿಗೆ ಈ ಹಿಂದೆ ಪ್ರತಿನಿಧಿಸಿದ್ದ ವಾರ್ಡ್‌ನಲ್ಲಿ ಮತ್ತೆ ಸ್ಪರ್ಧೆಗೆ ಅವಕಾಶ ಸಿಗದಂತಾಗಿದೆ.

ಹೌದು.. ಬಿಬಿಎಂಪಿ ಚುನಾವಣೆ ನಿಮಿತ್ತ ವಾರ್ಡ್‌ವಾರು ಮೀಸಲಾತಿ ಪಟ್ಟಿಯ ಕರಡನ್ನು ನಗರಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಪದ್ಮಾವತಿ ಅವರ ಪ್ರಕಾಶ್‌ನಗರ ವಾರ್ಡ್ ಮತ್ತು ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕರ್ಜುನ್ ಅವರ ಜಯನಗರ ವಾರ್ಡ್ ಅನ್ನು ನೆರೆಯ  ವಾರ್ಡ್ ಗಳೊಂದಿಗೆ ವಿಲೀನ ಮಾಡಲಾಗಿದೆ. ಜಿ.ಪದ್ಮಾವತಿ ಅವರು ಪ್ರತಿನಿಧಿಸಿದ್ದ ಪ್ರಕಾಶನಗರ ಹಾಗೂ ಗಂಗಾಂಬಿಕೆ ಪ್ರತಿನಿಧಿಸಿದ್ದ ಜಯನಗರ (153) ವಾರ್ಡ್‌ಗಳು ಮರುವಿಂಗಡಣೆ ಬಳಿಕ ಅಸ್ತಿತ್ವದಲ್ಲೇ ಇಲ್ಲ. ಅಂತೆಯೇ ಬಿ.ಎನ್‌.ಮಂಜುನಾಥ ರೆಡ್ಡಿ ಪ್ರತಿನಿಧಿಸಿದ್ದ ಮಡಿವಾಳ ವಾರ್ಡ್‌ನಲ್ಲಿ ಹಾಗೂ ಮಾಜಿ  ಮೇಯರ್ ಆರ್‌.ಸಂಪತ್‌ ಕುಮಾರ್‌ ಪ್ರತಿನಿಧಿಸಿದ್ದ ದೇವರ ಜೀವನಹಳ್ಳಿ ವಾರ್ಡ್‌ಗಳೆರಡರಲ್ಲೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದ್ದು, ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಅಬ್ದುಲ್ ವಾಜಿದ್‌ ಪ್ರತಿನಿಧಿಸುವ ಮನೋರಾಯನಪಾಳ್ಯ ವಾರ್ಡ್‌ನ ಹೆಸರು ಚಾಮುಂಡಿನಗರ ಎಂದು ಬದಲಾಗಿದ್ದು,  ಈ ವಾರ್ಡ್‌ನ ಮೀಸಲಾತಿಯನ್ನು ಸಾಮಾನ್ಯ ಮಹಿಳೆ ಎಂದು ಬದಲಾಯಿಸಲಾಗಿದೆ. 

ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿದ್ದ ಆರ್.ಎಸ್‌.ಸತ್ಯನಾರಾಯಣ ಪ್ರತಿನಿಧಿಸಿದ್ದ ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಮೀಸಲಾತಿಯನ್ನು ಸಾಮಾನ್ಯ ಮಹಿಳೆ ಎಂದು ಬದಲಾಯಿಸಲಾಗಿದೆ. ಆಡಳಿತ ಪಕ್ಷದ ನಾಯಕರಾಗಿದ್ದ ಎಂ.ಶಿವರಾಜು ಪ್ರತಿನಿಧಿಸಿದ್ದ ಶಂಕರಮಠ ವಾರ್ಡ್‌ನ ಮೀಸಲಾತಿಯನ್ನು ಹಿಂದುಳಿದ  ವರ್ಗ ಎನಿಂದ ಹಿಂದುಳಿದ ವರ್ಗ ಬಿಗೆ ಬದಲಾಯಿಸಲಾಗಿದೆ. ಇನ್ನು ನಿಕಟಪೂರ್ವ ಮೇಯರ್‌ ಎಂ.ಗೌತಮ್‌ ಕುಮಾರ್‌ ಪ್ರತಿನಿಧಿಸಿದ್ದ ಜೋಗುಪಾಳ್ಯ ವಾರ್ಡ್‌ನಲ್ಲಿ ಮೀಸಲಾತಿ ಬದಲಾವಣೆ ಮಾಡಿಲ್ಲ. ಅಂತೆಯೇ ಐದು ಬಾರಿ ಪಾಲಿಕೆ ಸದಸ್ಯರಾಗಿದ್ದ ಬಿಜೆಪಿಯ ಬಿ.ಎಸ್‌.ಸತ್ಯನಾರಾಯಣ ಪ್ರತಿನಿಧಿಸುತ್ತಿದ್ದ  ಬಸವನಗುಡಿ ವಾರ್ಡ್‌ ಅನ್ನು ಸಾಮಾನ್ಯ ಮಹಿಳೆಗೆ ಕಾಯ್ದಿರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಯಾವುದೇ ಸರ್ಕಾರವಿದ್ದರೂ, ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಇದು ಆಗಿತ್ತು. ಈಗಲೂ ಆಗುತ್ತಿದೆ. ಇಲಾಖೆ ಯಾವುದೇ ರೀತಿಯ ನಿರ್ಧಾರ  ತೆಗೆದುಕೊಂಡರೂ ಅದಕ್ಕೆ ಪರ-ವಿರೋಧ ವಿರುತ್ತದೆ. ಪ್ರಸ್ತುತ ಕರಡನಿ ಕುರಿತಂತೆ ಯಾವುದೇ ರೀತಿಯ ಸಲಹೆ ಮತ್ತು ವಿರೋಧಗಳಿದ್ದರೆ 7 ದಿನಗಳ ಒಳಗಾಗಿ ನಗರಾಭಿವೃದ್ಧಿ ಆಯುಕ್ತ ಕಚೇರಿಗೆ ತಲುಪಿಸಬಹುದು ಎಂದು ಹೇಳಿವೆ. 

ವರದಿಯನ್ನು ಸಲ್ಲಿಸಲು ಸಮಿತಿ ಇನ್ನೂ ಎರಡು ತಿಂಗಳು ಕೋರಿದೆ. ಆದರೆ ಸ್ಪೀಕರ್ ನವೆಂಬರ್ 10 ರವರೆಗೆ ಕಾಲಾವಕಾಶ ನೀಡಿದ್ದಾರೆ. ಈ ಶಿಫಾರಸ್ಸಿನ ಅನ್ವಯಈಗಿರುವ 198 ವಾರ್ಡ್ ಗಳನ್ನು 225 ಅಥವಾ 400 ವಾರ್ಡ್‌ಗಳಿಗೆ ಹೆಚ್ಚಳ ಮಾಡುವ ಕುರಿತು ಪ್ರಸ್ತಾಪವಿದೆ. ಬಿಬಿಎಂಪಿ ಪುನರ್ರಚನಾ  ಸಮಿತಿಯ  ವಿ ರವಿಚಂದರ್ ಅವರು ಮಾತನಾಡಿ, ಈಗಿರುವ ಕಾನೂನಿನ ಪ್ರಕಾರ, ಡಿಲಿಮಿಟೇಶನ್ ಅನ್ನು 200 ವಾರ್ಡ್‌ಗಳೊಳಗೆ ಸೀಮಿತಗೊಳಿಸಬೇಕು. ಸದ್ಯದಲ್ಲಿಯೇ ಬಿಬಿಎಂಪಿ ಚುನಾವಣೆಗೆ ಇದು ಆಧಾರವಾಗಲಿದೆ. ಆದಾಗ್ಯೂ, ಹೊಸ ಬಿಬಿಎಂಪಿ ಮಸೂದೆಯನ್ನು ಹೆಚ್ಚಿದ ವಾರ್ಡ್‌ಗಳೊಂದಿಗೆ  ಅಂಗೀಕರಿಸಿದರೆ, ಅದು 225 ಅಲ್ಲ 400 ವಾರ್ಡ್ ಗಳು ಎಂದು ಭಾವಿಸಿದರೆ, ಮತದಾನಕ್ಕೂ ಮೊದಲು ಡಿಲಿಮಿಟೇಶನ್ ಮತ್ತು ಮೀಸಲಾತಿ ಪ್ರಕ್ರಿಯೆಯನ್ನು ಪುನಃ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com