ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆ ವೈದ್ಯರಿಂದ ಮುಷ್ಕರ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ ಆರೋಗ್ಯ ಇಲಾಖೆ ವೈದ್ಯರು ಇಂದಿನಿಂದ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ವೈದ್ಯರು (ಸಾಂದರ್ಭಿಕ ಚಿತ್ರ)
ವೈದ್ಯರು (ಸಾಂದರ್ಭಿಕ ಚಿತ್ರ)

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ ಆರೋಗ್ಯ ಇಲಾಖೆ ವೈದ್ಯರು ಇಂದಿನಿಂದ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ಕೊರೋನಾ ಸೇರಿದಂತೆ ಸಾಂಕ್ರಾಮಿಕ ಹಾಗೂ ಇತರೆ ಕಾಯಿಲೆಗಳ ಅಂಕಿ-ಅಂಶ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ಅಸಹಕಾರ ಮುಷ್ಕರ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ. ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ನಮ್ಮ  ಬೇಡಿಕೆಗಳಿಗೆ ಸ್ಪಂದಿಸಲು ಸೆ.20ರವರೆಗೆ ಕಾಲಾವಕಾಶ ನೀಡಿದ್ದು, ಸೂಕ್ತ ಭರವಸೆ ದೊರೆಯದಿದ್ದರೆ ಸೆ.21 ರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ಸೇವೆ (ಒಪಿಡಿ) ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಅಡಿಯಲ್ಲಿ 4,968 ವೈದ್ಯರ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು. ಕೊರೋನಾ ಅವಧಿಯಲ್ಲಿ ಮೃತಪಟ್ಟಿರುವ ವೈದ್ಯರು, ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಡದಿದ್ದರೂ ಪರಿಹಾರ  ನೀಡಬೇಕು. ಬಿಬಿಎಂಪಿ ವ್ಯಾಪ್ತಿಯ 48 ಮಂದಿ ವೈದ್ಯರ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಬಿಬಿಎಂಪಿ ಜೊತೆ ವಿಲೀನ ಮಾಡಿರುವುದನ್ನು ಹಿಂಪಡೆಯಬೇಕು. ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂದು ಸಂಘ  ಒತ್ತಾಯಿಸಿದೆ.

ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್‌ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯ ನಿರ್ಧಾರದಂತೆ ಸೋಮವಾರ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅಂತೆಯೇ ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ  ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರನ್ನೂ ಭೇಟಿ ಮನವಿ ಪತ್ರ ನೀಡಿದರು. ಆದರೆ, ಇನ್ನೂ ಸೂಕ್ತ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಮಂಗಳವಾರದಿಂದ ‘ಅಸಹಕಾರ ಮುಷ್ಕರ’ ಹಮ್ಮಿಕೊಂಡಿದ್ದಾರೆ ಎನ್ನಲಾಗಿದೆ. ಮಂಗಳವಾರದಿಂದ ಕೋವಿಡ್‌-19 ಸೋಂಕಿತರು, ಡೆಂಘಿ, ಚಿಕೂನ್‌ ಗುನ್ಯಾ, ಎಚ್‌1ಎನ್‌1  ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳ ಮಾಹಿತಿ ದೊರೆಯುವುದಿಲ್ಲ. ಜೊತೆಗೆ ಟಿಬಿ, ಕುಷ್ಟರೋಗ, ತಾಯಂದಿರು ಮತ್ತು ಮಕ್ಕಳ ಸಾವು, ಜಂತುಹುಳು ಮಾತ್ರೆ ವಿತರಣೆ, ಹೆರಿಗೆ ವಿವರ ಸೇರಿದಂತೆ ಆಸ್ಪತ್ರೆಗಳಲ್ಲಿ ನಡೆಯುವ ಚಿಕಿತ್ಸೆಯ ವಿವರಗಳು ಹಾಗೂ ಆರೋಗ್ಯ ಕಾರ್ಯಕರ್ತರು ನಡೆಸುವ ಆರೋಗ್ಯ  ಕುರಿತು ಸಮೀಕ್ಷೆ ಮತ್ತು ಜಾಗೃತಿ ಕಾರ್ಯಕ್ರಮಗಳ ಯಾವುದೇ ವರದಿ ಲಭ್ಯವಾಗದೆ ಆರೋಗ್ಯ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ.

ಈ ಬಗ್ಗೆ ಮಾತನಾಡಿರುವ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್‌ ಅವರು, 'ಆರೋಗ್ಯ ಇಲಾಖೆ ಸಚಿವರೂ ಸೇರಿದಂತೆ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ಇಲಾಖೆಯ ವೈದ್ಯಾಧಿಕಾರಿಗಳು, ಜಿಲ್ಲಾಧಿಕಾರಿ ನಡೆಸುವ ಝೂಮ್‌ ಕಾನ್ಫರೆನ್ಸ್‌, ವೆಬಿನಾರ್‌, ಆನ್‌ಲೈನ್‌ ಸಭೆಗಳಲ್ಲಿ  ಭಾಗವಹಿಸದೆ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿದ್ದಾರೆ. ಅಂತೆಯೇ ಮಂಗಳವಾರದಿಂದ ವಿವಿಧ ಯೋಜನೆಗಳು ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ವರದಿಯನ್ನು ಸರ್ಕಾರಕ್ಕೆ ನೀಡುವುದಿಲ್ಲ. ರೋಗಿಗಳಿಗೆ ಯಾವುದೇ ರೀತಿಯ ತೊಂದರೆ  ಆಗಬಾರದು ಎಂಬ ಕಾರಣಕ್ಕೆ ಸೇವೆಗೆ ಹಾಜರಾಗಿ ಎಂದಿನಂತೆ ಚಿಕಿತ್ಸೆ ನೀಡಲಾಗುವುದು. ಸೆ. 21ರಂದು ತುರ್ತು ಚಿಕಿತ್ಸೆ ಹೊರತುಪಡಿಸಿ, ಹೊರ ರೋಗಿಗಳ ಸೇವೆ ಸಂಪೂರ್ಣ ಸ್ಥಗಿತಗೊಳಿಸಿ 'ಬೆಂಗಳೂರು ಚಲೋ' ಜಾಥಾ ನಡೆಸಲಾಗುವುದು. ಈ ವೇಳೆ ತುರ್ತು ಚಿಕಿತ್ಸೆ, ಕೊರೋನಾ ಸೇವೆಯಲ್ಲಿ ವ್ಯತ್ಯಯ  ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಬೇಡಿಕೆ ಈಡೇರದಿದ್ದರೆ ಬೆಂಗಳೂರು ಚಲೋ
ಇನ್ನು ವೈದ್ಯರ ಬೇಡಿಕೆ ಈಡೇರದಿದ್ದರೆ ಸೆಪ್ಟೆಂಬರ್ 15ರಿಂದ ಆರೋಗ್ಯ ಇಲಾಖೆಗೆ ಕೋವಿಡ್ ವರದಿ ಸಲ್ಲಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಅಧಿಕಾರಿಗಳ ಸಂಘದ ಡಾ.ಪ್ರಕಾಶ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಕೇವಲ ತುರ್ತು ಪರಿಸ್ಥಿತಿ ಬಿಟ್ಟು ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಬೆಂಗಳೂರು ಚಲೋ ಅಭಿಯಾನ ನಡೆಸುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com