ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೆಪಿಎಸ್ ಸಿ ಹಗರಣ: ಸಂಪುಟ ಉಪ ಸಮಿತಿ ರಚಿಸಲು ಕ್ಯಾಬಿನೆಟ್ ತೀರ್ಮಾನ

2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರು ಮತ್ತು 9 ಮಂದಿ ಮಾಜಿ ಸದಸ್ಯರನ್ನು ಪ್ರಾಸಿಕ್ಯೂಶನ್ ಒಳಪಡಿಸಬೇಕೇ, ಬೇಡವೇ ಅನ್ನುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರು ಮತ್ತು 9 ಮಂದಿ ಮಾಜಿ ಸದಸ್ಯರನ್ನು ಪ್ರಾಸಿಕ್ಯೂಶನ್ ಒಳಪಡಿಸಬೇಕೇ, ಬೇಡವೇ ಅನ್ನುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ವರದಿ ಪಡೆಯಲು ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ. ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿವರ ನೀಡಿದ ಅವರು, ಕರ್ನಾಟಕ ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯಕ-2020ಕ್ಕೆ ಅನುಮೋದನೆ ನೀಡಲಾಗಿದೆ. ಜಿಎಸ್ ಟಿಪಿಗೆ ಕೇಂದ್ರ ಸರ್ಕಾರ ಶೇ.5ರಷ್ಟು ಹೆಚ್ಚಳ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ 33 ಸಾವಿರ ಕೋಟಿ ರೂ ಸಾಲ ಮಾಡಲು ನಿರ್ಧಾರ ಕೈಗೊಂಡಿದೆ ಎಂದರು. 
ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ಆದರೆ ಮಾಮೂಲಿ ಆದಾಯದಲ್ಲಿ ಸ್ವಲ್ಪ ಕೊರತೆ ಆಗಿದೆ. ಅದನ್ನು ಹೇಳಲು ಯಾವುದೇ ಮುಚ್ಚುಮರೆಯಿಲ್ಲ. ಪ್ರಪಂಚದಾದ್ಯಂತ ಕೋವಿಡ್‌ನಿಂದ ಎಲ್ಲರಿಗೂ ಸಮಸ್ಯೆ ಆಗಿದೆ. ಅದೇ ರೀತಿ ಆದಾಯದಲ್ಲಿ ಸ್ವಲ್ಪ ಕಡಿಮೆ ಆಗಿರುವುದು ನಿಜ. ಆದ್ದರಿಂದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು. 

ರಾಜ್ಯಗಳು ಸಾಲ ಪಡೆಯುವ ಪ್ರಮಾಣ ಜಿಎಸ್‌ಡಿಪಿಯ ಶೇಕಡಾ 3ರಿಂದ ಶೇ.5ಕ್ಕೆ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಆದ್ದರಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕೇಂದ್ರ ಸಾಲ ಪಡೆಯುವ ಪ್ರಮಾಣ ಶೇ. 5ಕ್ಕೆ ಹೆಚ್ಚಿಸಿದ್ದರಿಂದ ರಾಜ್ಯವು 36,000 ಕೋಟಿ ರೂ.ಸಾಲ ಪಡೆಯಬಹುದಾದರೂ, 33,000 ಕೋಟಿ ಸಾಲ ಪಡೆಯಲು ನಿರ್ಧರಿಸಿದೆ ಎಂದು ಹೇಳಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಕ್ಷ-ಕಿರಣ ಕೇಂದ್ರಗಳಲ್ಲಿ ಎಇಆರ್ ಬಿ ನಿಯಮಗಳ ಅನುಪಾಲನೆಗಾಗಿ ಸೇವಾದಾರರನ್ನು ಅಂದಾಜು 11.66 ಕೋಟಿ ರೂ.ವೆಚ್ಚದಲ್ಲಿ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಹಿಂದಿನ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಉಪ ವಿದ್ಯುತ್ ಪರೀಕ್ಷಕ ಎನ್.ವಿ.ಶ್ರೀನಿವಾಸ ಅವರಿಗೆ ವಿಧಿಸಿರುವ ದಂಡನೆಯನ್ನು ಮಾರ್ಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಕೈಗಾರಿಕಾ ವಿವಾದ ಮತ್ತು ಕೆಲವು ಇತರ ಕಾನೂನುಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2020 ಹಾಗೂ ಕರ್ನಾಟಕ ನ್ಯಾಯಾಲಯದ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ (ತಿದ್ದುಪಡಿ) ವಿಧೇಯಕ 2020ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com