ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆದ್ದ ಅವಧಿಪೂರ್ವವಾಗಿ ಜನಿಸಿದ 980 ಗ್ರಾಂ ತೂಕದ ಮಗು!

ಮಾರಕ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವಧಿಪೂರ್ವ ನವಜಾತ ಹೆಣ್ಣು ಮಗು ಸೋಂಕು ಗೆದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವಧಿಪೂರ್ವ ನವಜಾತ ಹೆಣ್ಣು ಮಗು ಸೋಂಕು ಗೆದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಹೆಣ್ಣುಮಗು ಕೇವಲ 980 ಗ್ರಾಂ ತೂಕವಿತ್ತು. ವೈದ್ಯರು ಹೇಳುವಂತೆ ಸಾಮಾನ್ಯವಾಗಿ ಆರೋಗ್ಯಕರ ಮಗುವಿನ ತೂಕವು 2.8-2.9 ಕಿಲೋಗ್ರಾಂ ಇರಬೇಕು. ಆದರೆ ಈ ಮಗು ಅವಧಿಪೂರ್ವವಾಗಿ ಜನಿಸಿದ ಹಿನ್ನಲೆಯಲ್ಲಿ ಅತ್ಯಂತ ಕಡಿಮೆ ತೂಕವಿತ್ತು. 

ಗರ್ಭಿಣಿ ಮಹಿಳೆಯನ್ನು ಕಳೆದ ಆಗಸ್ಟ್ 13ರಂದು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಮಗುವಿಗೆ ಜನ್ಮ ನೀಡಿದ್ದರು. ಈ ಹೆಣ್ಣುಮಗು 5 ದಿನಗಳ ಕಾಲ, ಮಕ್ಕಳ ಪ್ರತ್ಯೇಕ ವಾರ್ಡ್‌ನಲ್ಲಿತ್ತು. ನಂತರ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಯ ಅಪಘಾತ ಆರೈಕೆ  ಕೇಂದ್ರಕ್ಕೆ (TCC) ಸ್ಥಳಾಂತರಿಸಲಾಯಿತು. ಮಗುವಿಗೆ ತೀವ್ರವಾದ ಆರೋಗ್ಯ ಸಮಸ್ಯೆಗಳಿದ್ದುದರಿಂದ, ಆರೋಗ್ಯ ಚೇತರಿಕೆ ಸವಾಲಿನದ್ದಾಗಿತ್ತು. 

ಆದರೆ ಈ ವೇಳೆ ಮಗುವಿನ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ಬಂದ ವರದಿಯಲ್ಲಿ ಮಗುವಿಗೆ ಲಕ್ಷಣರಹಿತ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಮಗುವಿಗೆ ಕೊರೊನಾ ಚಿಕಿತ್ಸೆ ನೀಡಲಾಯಿತು. ಮಗುವು TCCನಲ್ಲಿದ್ದಾಗ ಎಕ್ಸ್‌ಪ್ರೆಸ್ ಬ್ರೆಸ್ಟ್ ಫೀಡಿಂಗ್ ಮುಖಾಂತರ ಮಗುವಿಗೆ  ಹಾಲುಣಿಸಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಇದೀಗ ಮಗುವಿನ ಸೋಂಕು ನಿವಾರಣೆಯಾಗಿದ್ದು, ಕಡಿಮೆ ತೂಕದ ಜನನ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ  (BMCRI) ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಮಲ್ಲೇಶ್ ಹೇಳಿದ್ದಾರೆ.

ಈ ವೇಳೆ ಮಾತನಾಡಿದ BMCRI ಸಹಾಯಕ ಪ್ರಾಧ್ಯಾಪಕ ಡಾ.ರವಿಚಂದ್ರ ಅವರು, 'ಸ್ತನ್ಯಪಾನ ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ತಾಯಿಯನ್ನು ಆಸ್ಪತ್ರೆಗೆ ಕರೆಸಲಾಯಿತು. ಮಗುವಿನ ವೈದ್ಯಕೀಯ ಪರೀಕ್ಷೆ ವೇಳೆ ಮಗು ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದ ಸಕ್ಕರೆ) ಮತ್ತು ಹೈಪೋಕಾಲ್ಕೆಮಿಯಾ (ಕಡಿಮೆ  ಕ್ಯಾಲ್ಸಿಯಂ ಮಟ್ಟ)ದಿಂದ ಬಳಲುತ್ತಿರುವುದು ಕಂಡುಬಂದಿತ್ತು. ಮಗುವು ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಹಾಗಾಗಿ, ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ.  ಡಿಸ್ಚಾರ್ಜ್ ಸಮಯದಲ್ಲಿ, ಮಗಮಗು 1.2 ಕೆಜಿ ತೂಕವಿತ್ತು ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com