ಡಿಜೆ ಹಳ್ಳಿ ಗಲಭೆ ಪೂರ್ವ ನಿಯೋಜಿತವಲ್ಲ: ವರದಿ

ನಗರದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಕೋಮು ಪ್ರೇರಿತವಾಗಲಿ, ಪೂರ್ವ ನಿಯೋಜಿತವಾಗಲಿ ಅಲ್ಲ. ಹಿಂದೂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗಲಭೆ ನಡೆದಿಲ್ಲ. ಇದೊಂದು ಸಹಜವಾಗಿ ನಡೆದ ಘಟನೆ ಎಂದು ಬೆಂಗಳೂರು ನಾಗರೀಕ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಸತ್ಯಶೋಧನಾ ವರದಿ ಅಭಿಪ್ರಾಯಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಕೋಮು ಪ್ರೇರಿತವಾಗಲಿ, ಪೂರ್ವ ನಿಯೋಜಿತವಾಗಲಿ ಅಲ್ಲ. ಹಿಂದೂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗಲಭೆ ನಡೆದಿಲ್ಲ. ಇದೊಂದು ಸಹಜವಾಗಿ ನಡೆದ ಘಟನೆ ಎಂದು ಬೆಂಗಳೂರು ನಾಗರೀಕ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಸತ್ಯಶೋಧನಾ ವರದಿ ಅಭಿಪ್ರಾಯಪಟ್ಟಿದೆ.

ನಿನ್ನೆಯಷ್ಟೇ ವಿಡಿಯೋ ಸಂವಾದದ ಮೂಲಕ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಬಿಡುಗಡೆ ಮಾಡಿದ ವರದಿಯಲ್ಲಿ ಘಟನೆಗೆ ಕಾರಣವಾಕ ಅಂಶ, ಗಲಭೆ ತೀವ್ರವಾಗುವಲ್ಲಿ ಪೊಲೀಸರ ವೈಫಲ್ಯ, ಮಾಧ್ಯಮಗಳ ಪಾತ್ರ ಸೇರಿದಂತೆ ಪ್ರಕರಣ ಸಂಬಂಧ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳಿಗೆ ಸಂಬಂಧಪಟ್ಟ ಅನೇಕ ಶಿಫಾರಸು ಮಾಡಲಾಗಿದೆ. 

ನವೀನ್ ಎಂಬಾತ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಕಾರುವ, ಪ್ರಚೋದಿಸುವ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗಿದ್ದರೂ, ಪೋಸ್ಟ್ ಹಾಕಿದ್ದರ ಹಿಂದಿನ ಉದ್ದೇಶ ಹಾಗೂ ಪ್ರೇರಣೆ ಏನೆಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುವುದಾಗಲಿ, ಮಾಧ್ಯಮಗಳು ಗಮನ ಹರಿಸುವುದಾಗಲಿ ನಡೆದಿಲ್ಲ. ಬದಲಾಗಿ ಮಾಧ್ಯಮಗಳು ಎದ್ದು ಕಾಣುವಂತಹ ಮತ್ತು ಉದ್ರೇಕಗೊಳಿಸುವಂತಹ ಹಿಂಸಾಚಾರದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಫೇಸ್ ಬುಕ್ ಪೋಸ್ಟ್ ದೂರು ಬಂದ ಕೂಡಲೇ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಎಫ್ಐಆರ್ ದಾಖಲು ಮಾಡಿಕೊಳ್ಳುವಲ್ಲಿ ವಿಳಂಬ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೇ ಇರುವುದನ್ನು ನೋಡಿದರೆ, ಇದು ಶಾಸಕರ ಹಸ್ತಕ್ಷೇಪದಿಂದಲೇ ನಡೆದಿದೆಎಂಬ ಗ್ರಹಿಕೆಯನ್ನು ಮೂಡಿಸುತ್ತಿದೆ. ಜೊತೆಗೆ ಗುಪ್ತಚರ ಇಲಾಖೆಯ ವೈಫಲ್ಯವೂ ಎದ್ದು ಕಾಣುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಅಪರಾಧ ಚಟುವಟಿಕೆ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಆಪಾದಿತರ ವಿರುದ್ಧ ಹೇರಲಾಗಿರುವ ಆಪಾದನೆಗಳನ್ನು ಕೈ ಬಿಡಬೇಕು. ದ್ವೇಷಪೂರಿತ ಮಾತು ಆಡಿರುವ ಶಾಸಕರ ವಿರುದ್ಧ ಅಪರಾಧ ನೀತಿ ಸಂಹಿತೆ ಅನ್ವಯ ಕ್ರಮ ಕೈಗೊಳ್ಳಬೇಕು. ಮಾಧ್ಯಮಗಳು ಗಲಭೆಗೆ ಸಂಬಂಧಿಸಿದ ಉದ್ರೇಕಕಾರಿ ಹಾಗೂ ಪ್ರಚೋದನಾತ್ಮಕ ವರದಿಯನ್ನು ಕೈಬಿಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com