ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ 12 ಗಂಟೆಗಳಲ್ಲಿ 71 ಕೊರೋನಾ ಸೋಂಕಿತರ ಸಾವು!

ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ 12 ಗಂಟೆಗಳಲ್ಲಿ 71 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ ಎಂಬ ಅಚ್ಚರಿ ಅಂಶ ಆಸ್ಪತ್ರೆಯ ರೋಗಿಗಳ ಕೋವಿಡ್ ಮರಣ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ 12 ಗಂಟೆಗಳಲ್ಲಿ 71 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ ಎಂಬ ಅಚ್ಚರಿ ಅಂಶ ಆಸ್ಪತ್ರೆಯ ರೋಗಿಗಳ ಕೋವಿಡ್ ಮರಣ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಹೌದು.. ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗದ ಮೊದಲ ಮೂರು ತಿಂಗಳು ಬೆಂಗಳೂರಿನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದ್ದ ಏಕೈಕ ಆಸ್ಪತ್ರೆಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ವರೆಗೂ 370 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈ ಪೈಕಿ 71 ಮಂದಿ ಸೋಂಕಿತರು  ಆಸ್ಪತ್ರೆಗೆ ದಾಖಲಾದ 12 ಗಂಟೆಗಳಲ್ಲಿಯೇ ಸಾವನ್ನಪ್ಪಿದ್ದಾರೆ. 32 ಮಂದಿ ರೋಗಿಗಳು ಆಸ್ಪತ್ರೆಗೆ ದಾಖಲಾದ 24 ಗಂಟೆಗಳೊಳಗೆ ಸಾವನ್ನಪ್ಪಿದ್ದಾರೆ. ರಾಜ್ಯದ ಅತೀ ದೊಡ್ಡ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಈ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 5,000 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು  ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆ ಆಡಳಿತ ಮಂಡಳಿ, ಸಾವಿಗೀಡಾದ ಬಹುತೇಕ ರೋಗಿಗಳು ಇತರೆ ಖಾಸಗಿ ಆಸ್ಪತ್ರೆ ಮತ್ತು ಕಾರ್ಪೋರೇಟ್ ಆಸ್ಪತ್ರೆಗಳ ಅಂತಿಮ ಕ್ಷಣದ ಶಿಫಾರಸ್ಸಿನ ಮೇರೆಗೆ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ. ಆಸ್ಪತ್ರೆಗೆ ದಾಖಲಾದಾಗ ಅವರೆಲ್ಲರೂ 2ನೇ ಹಂತದ ಕೋವಿಡ್  ನ್ಯುಮೋನಿಯಾ ಮತ್ತು ಸೆಪ್ಟಿಸೆಮಿಯಾ ಮುಂತಾದ ತೀವ್ರ ಸ್ಥಿತಿಯ ಅನಾರೋಗ್ಯದ ಪರಿಸ್ಥಿತಿಯಲ್ಲಿದ್ದರು. ಆರಂಭಿಕ ಹಂತದಲ್ಲಿ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಂತಿಮ ಕ್ಷಣದಲ್ಲಿ ಇಲ್ಲಿಗೆ ದಾಖಲಾದವರಾಗಿದ್ದಾರೆ. ಕೆಲ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ  ಸಾವಿಗೀಡಾದ ಪ್ರಕರಣಗಳೂ ಕೂಡ ಇವೆ. ಆಸ್ಪತ್ರೆಗೆ ದಾಖಲಾದ 10 ರಿಂದ 12 ಗಂಟೆಗಳ ಅವಧಿಯಲ್ಲಿ ಸಾವು ಸಂಭವಿಸಿದೆ ಎಂಬ ಮಾತ್ರಕ್ಕೆ ಅದು ಆಸ್ಪತ್ರೆಯ ಐಸಿಯುನಲ್ಲಿ ಸಂಭವಿಸಿದ ಸಾವುಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಸ್ಮಿತಾ ಸೆಗು ಹೇಳಿದ್ದಾರೆ.

ಸೋಂಕಿತರ ಸಾವಿಗೆ ನಿಖರ ಕಾರಣ ಎಂದು ಹೇಳುವುದಾದರೆ ಅಂತಿಮ ಕ್ಷಣದಲ್ಲಿ ಅವರು ಆಸ್ಪತ್ರೆಗೆ ದಾಖಲಾಗುತ್ತಾರೆ. ಆಗ ಪರಿಸ್ಥಿತಿ ವೈದ್ಯರ ಕೈ ಮೀರಿರುತ್ತದೆ. ಅಂತಿಮ ಕ್ಷಣದಲ್ಲಿ ಅವರ ಸಮಸ್ಯೆ ಅರಿಯುವಷ್ಟು ಸಮಯಾವಕಾಶ ವಿರುವುದಿಲ್ಲ. ಹೀಗಾಗಿ ವೈದ್ಯರು ಏನೇ ಪ್ರಯತ್ನ ಪಟ್ಟರೂ ಅದು ಸಫಲವಾಗುವುದಿಲ್ಲ. ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಪ್ರಮಾಣದ ಚಿಕಿತ್ಸಾ ವ್ಯವಸ್ಥೆ ಇಲ್ಲದೆ, ವೆಂಟಿಲೇಟರ್ ಮತ್ತು ಇತರೆ ತುರ್ತು ವ್ಯವಸ್ಥೆಗಳಿಲ್ಲದೆ ಸೋಂಕಿತರ ಪರಿಸ್ಥಿತಿ ಹದಗೆಡುತ್ತದೆ. ಆಸ್ಪತ್ರೆಯ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂಬ ಭೀತಿಯಿಂದ ಅವರು ಅಂತಿಮ ಕ್ಷಣದಲ್ಲಿ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಹೀಗೆ ಬಂದ ಬಹುತೇಕ ರೋಗಿಗಳು ಮಧುಮೇಹ, ಅಧಿಕ ರಕ್ತದೊತ್ತಡ, ಡಯಾಲಿಸಿಸ್ ಅಗತ್ಯವಿರುವ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮುಂತಾದ ಕೋವಿಡ್ ಅಲ್ಲದ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಎಂದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com