ಸೆಪ್ಟೆಂಬರ್ 22ರಿಂದ ಮಹಾರಾಷ್ಟ್ರಕ್ಕೆ ರಾಜ್ಯದಿಂದ ಬಸ್ ಸೇವೆ ಆರಂಭ: ಕೆಎಸ್ಆರ್ ಟಿಸಿ

ಕೋವಿಡ್-19 ಮತ್ತು ಲಾಕ್ ಡೌನ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಅಂತರ್ ರಾಜ್ಯ ಸಾರಿಗೆ ಸೇವೆಯನ್ನು ಸೆ.22ರಿಂದ ಆರಂಭಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ ಟಿಸಿ) ಮಾಹಿತಿ ನೀಡಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣ
ಕೆಎಸ್ಆರ್ಟಿಸಿ ಬಸ್ ನಿಲ್ದಾಣ

ಬೆಂಗಳೂರು: ಕೋವಿಡ್-19 ಮತ್ತು ಲಾಕ್ ಡೌನ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಅಂತರ್ ರಾಜ್ಯ ಸಾರಿಗೆ ಸೇವೆಯನ್ನು ಸೆ.22ರಿಂದ ಆರಂಭಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ ಟಿಸಿ) ಮಾಹಿತಿ ನೀಡಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಕೆಎಸ್ಆರ್ ಟಿಸಿ, ಕೋವಿಡ್-19 ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಂತರ್ ರಾಜ್ಯ ಸಾರಿಗೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಕೊವಿಡ್-19 ಲಾಕ್ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ  ಅನುಕೂಲಕ್ಕಾಗಿ ದಿನಾಂಕ: 22-9-2020 ರಿಂದ ಮಹಾರಾಷ್ಟ್ರ ರಾಜ್ಯಕ್ಕೆ ಬೆಂಗಳೂರು, ದಾವಣಗೆರೆ,ಮಂಗಳೂರು ಒಳಗೊಂಡಂತೆ ರಾಜ್ಯದ ವಿವಿಧ ಸ್ಥಳಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸಾರಿಗೆಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುತ್ತಿದೆ ಎಂದು ಹೇಳಿದೆ. 

ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿರುತ್ತದೆ. ಮುಂಗಡ ಆಸನಗಳನ್ನು ಇಲಾಖೆಯ ವೆಬ್ ಸೈಟ್ https://ksrtc.in ಮತ್ತು ನಿಗಮದ ಫ್ರಾಂಚೈಸಿ ಕೌಂಟರ್‌ಗಳ ಮುಖಾಂತರ ಕಾಯ್ದಿರಿಸಿಕೊಳ್ಳಬಹುದಾಗಿದೆ. ಪ್ರಯಾಣಿಕರು ಸದರಿ ಸೌಲಭ್ಯದ ಸದುಪಯೋಗ ಪಡೆಯಲು ಕೋರಲಾಗಿದೆ  ಎಂದು ಟ್ವೀಟ್ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಇಲಾಖೆಯ ಅಧಿಕಾರಿಗಳು, ಮಹಾರಾಷ್ಟ್ರಕ್ಕೆ ರಾಜ್ಯದಿಂದ 2 ಮಾರ್ಗವಾಗಿ ಅಂದರೆ ಹೊಸಪೇಟೆ ಮತ್ತು ಕೊಲ್ಲಾಪುರ ಮಾರ್ಗವಾಗಿ ಬಸ್ ಗಳು ತೆರಳುತ್ತಿದ್ದವು. ಈ ಪೈಕಿ ಬೆಂಗಳೂರಿನಿಂದ ಕೊಲ್ಲಾಪುರ ಮಾರ್ಗವಾಗಿ ಬಸ್ ಗಳು ಹೋಗಲು ಅವಕಾಶವಿರಲಿಲ್ಲ. ಇದೀಗ ನಮಗೆ ಅನುಮತಿ  ದೊರೆತಿದ್ದು, ಸೆಪ್ಟೆಂಬರ್ 22ರಿಂದ ಈ ಮಾರ್ಗವಾಗಿ ಸೇವೆ ಆರಂಭವಾಗಲಿದೆ. ಇನ್ನು ಸದ್ಯದ ಮಟ್ಟಿಗೆ ತಮಿಳುನಾಡಿಗೆ ಇಲಾಖೆಯಿಂದ ಯಾವುದೇ ಬಸ್ ಸೇವೆ ಆರಂಭವಾಗಿಲ್ಲ. ತೆಲಂಗಾಣ ಸರ್ಕಾರ ಕೂಡ ಅಂತರ್ ರಾಜ್ಯ ಸಾರಿಗೆ ಸೇವೆಗೆ ಅನುಮತಿ ನೀಡಿಲ್ಲ. ಆದರೆ ಆಂಧ್ರ ಪ್ರದೇಶದ ಕೆಲಭಾಗಗಳಿಗೆ ಅಂದರೆ  ರಾಯಲಸೀಮ, ವಿಜಯವಾಡ, ನೆಲ್ಲೂರು, ಒಂಗೋಲ್, ತಿರುಪತಿ, ಮಂತ್ರಾಲಯ, ಅನಂತಪುರ ಮತ್ತು ಕರ್ನೂಲಿಗೆ ಎಂದಿನಂತೆ ಬಸ್ ಸೇವೆ ಮುಂದುವರೆದಿದೆ. ಕೇರಳಕ್ಕೆ ಸದ್ಯದ ಮಟ್ಟಿಗೆ ಎರ್ನಾಕುಲಂಗೆ ಮಾತ್ರ ಬಸ್ ನೀಡಲಾಗುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com