ಆತ್ಮನಿರ್ಭರದಡಿ ಆಲೆಮನೆ ಪುನಶ್ಚೇತನ: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

ಆತ್ಮನಿರ್ಭರ ಯೋಜನೆಯಡಿಯಲ್ಲಿ ಆಲೆಮನೆಗಳನ್ನು ಪುನಃಶ್ಚೇತನಗೊಳಿಸಲಾಗುವುದು ಎಂದು ಸಹಕಾರ ಸಚಿವ  ಎಸ್ ಟಿ ಸೋಮಶೇಖರ್ ಶನಿವಾರ ತಿಳಿಸಿದರು.
ಸಚಿವ ಎಸ್ ಟಿ ಸೋಮಶೇಖರ್
ಸಚಿವ ಎಸ್ ಟಿ ಸೋಮಶೇಖರ್

ಮಂಡ್ಯ: ಆತ್ಮನಿರ್ಭರ ಯೋಜನೆಯಡಿಯಲ್ಲಿ  ಆಲೆಮನೆಗಳನ್ನು ಪುನಃಶ್ಚೇತನಗೊಳಿಸಲಾಗುವುದು ಎಂದು ಸಹಕಾರ ಸಚಿವ  ಎಸ್ ಟಿ ಸೋಮಶೇಖರ್ ಶನಿವಾರ ತಿಳಿಸಿದರು.

ಮಂಡ್ಯ ನಗರದ ಎಪಿಎಂಸಿ ಎದುರಿನ ಕಾಳೇಗೌಡ ರೈಸ್ ಮಿಲ್ ಮಾಲೀಕ ಗುರುಸ್ವಾಮಿರವರ ಆಲೆಮನೆಗೆ ಇಂದು ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಆತ್ಮನಿರ್ಭರ ಯೋಜನೆಯಡಿಯಲ್ಲಿ ಸುಮಾರು 20 ಲಕ್ಷ ಕೋಟಿ ರೂ ಅನುದಾನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ  ಅವರು ನೀಡಿದ್ದಾರೆ. ಸಹಕಾರ ಇಲಾಖೆ ವತಿಯಿಂದ ಆರ್ಥಿಕ ಸ್ಪಂದನ ಕಾರ್ಯಕ್ರಮ ರೂಪಿಸಿದೆ. ಆರ್ಥಿಕ ಸ್ಪಂದನೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ. ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಚಾಲನೆ ಕೊಟ್ಟಿದ್ದಾರೆ. ಈ ಎರಡೂ ಯೋಜನೆಗಳ ಮೂಲಕ ಆಲೆಮನೆಗಳಿಗೆ ಹಣಕಾಸಿನ ನೆರವು ನೀಡುವ  ದೃಷ್ಟಿಯಿಂದ, ಸಾಲ ಸೌಲಭ್ಯ ಒದಗಿಸಿ, ಆ ಮೂಲಕ ಮೈಸೂರು ವಿಭಾಗಕ್ಕೆ ಸೇರಿರುವ ಮಂಡ್ಯ ಜಿಲ್ಲೆಯ ಆಲೆಮನೆ ಮಾಲೀಕರಿಗೂ ಸಾಲ ನೀಡಲು ಚರ್ಚೆ ಮಾಡಲಾಗುತ್ತಿದೆ ಎಂದರು.

ಸಾವಯವ ಬೆಲ್ಲ ತಯಾರಿಕೆ ಮಾಡಲು ಆಲೆಮನೆಗಳನ್ನು ಉತ್ತೇಜಿಸುವ ಸಲುವಾಗಿ ಹಣಕಾಸಿನ ನೆರವು ನೀಡಲಾಗುವುದು, ಬೆಲ್ಲ ತಯಾರು ಮಾಡುವ ಆಲೆಮನೆಗಳಿಗೆ ಅಂತಾರಾಷ್ಟ್ರಿಯ ಮಾರುಕಟ್ಟೆ ಒದಗಿಸುವುದು ಈ ಯೋಜನೆ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಆಲೆಮನೆಗಳಿಗೆ ಸಾಲ ನೀಡಿದರೆ ಆಧುನಿಕ  ಯಂತ್ರೋಪಕರಣಗಳನ್ನು ಬಳಸಿಕೊಂಡು ಮೇಲ್ದರ್ಜೆಗೇರಲು ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದರು. ಆಲೆಮನೆ ಮಾಲೀಕರ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆಸಿ ಬಳಿಕ ಅವರಿಗೆ ಆಧುನಿಕ ಯಂತ್ರೋಪಕರಣ  ಕೊಳ್ಳಲು ಸಾಲದ ಅಗತ್ಯತೆ ಇದೆ ಎಂಬುದನ್ನು ಮನಗಂಡು ಅ. 2 ರಂದು ಒಂದು  ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ಹೇಳಿದರು.

ಕಬ್ಬಿನ ಹಾಲು ಕುಡಿದ ಸಚಿವರು
ಇದೇ ವೇಳೆ ಆಲಮನೆಯಲ್ಲಿ ಆಗತಾನೆ ಅರೆಯುತ್ತಿದ್ದ ಕಬ್ಬಿನಿಂದ ಶುದ್ದ,ನ್ಯಾಚುರಿಟಿಯ ಕಬ್ಬಿನ ಹಾಲನ್ನು ಕುಡಿಯುವ ಮೂಲಕ ಕಬ್ಬಿನರುಚಿಯ ಗುಣಮಟ್ಟವನ್ನೂ ಸಹ ಸಚಿವರು ಪರಿಶೀಲಿಸಿದರು. ಇದೇ ವೇಳೆ ಮೈಸೂರು ದಸರಾವನ್ನು ಪ್ರಸಕ್ತ ಬಾರಿ ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಳವಾಗಿಯೇ ಆಚರಿಸುತ್ತೇವೆ.  ವೈದ್ಯರು, ನರ್ಸ್, ಪೌರ ಕಾರ್ಮಿಕರು,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉದ್ಘಾಟಕರಾಗಿರುವ ಹಿನ್ನೆಲೆಯಲ್ಲಿ ಆಯಾ ಇಲಾಖೆಯ ಮುಖ್ಯಸ್ಥರಿಗೆ ಒಬ್ಬೊಬ್ಬರ ಹೆಸರುಗಳನ್ನು ಆಯ್ಕೆ ಮಾಡಿ ಕಳುಹಿಸುವಂತೆ ಸೂಚಿಸಲಾಗಿದೆ. ಕಾರ್ಯಕ್ರಮವನ್ನು ವೈದ್ಯರಿಂದ ಉದ್ಘಾಟಿಸಿ ಉಳಿದವರಿಗೆ  ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com