ಕೆಜಿಎಫ್ ರಸ್ತೆ ಅಗಲೀಕರಣ ಕಾಮಗಾರಿ ಭರವಸೆ: ಕೋಲಾರ ಡಿಸಿ ಕಚೇರಿ ಎದುರಿನ ಪ್ರತಿಭಟನೆ ವಾಪಸ್ ಪಡೆದ ಶಾಸಕಿ ರೂಪಾ ಶಶಿಧರ್​​​ 

ಕೆಜಿಎಫ್ ರಸ್ತೆ ಅಗಲೀಕರಣದ ಕಾಮಗಾರಿ ಮುಗಿಸುವಂತೆ ಆಗ್ರಹಿಸಿ ಕೋಲಾರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಶಾಸಕಿ ರೂಪಾ ಶಶಿಧರ್ ಅವರು ತಮ್ಮ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
ಶಾಸಕಿ ರೂಪಾ ಶಶಿಧರ್
ಶಾಸಕಿ ರೂಪಾ ಶಶಿಧರ್

ಕೋಲಾರ: ಕೆಜಿಎಫ್ ರಸ್ತೆ ಅಗಲೀಕರಣದ ಕಾಮಗಾರಿ ಮುಗಿಸುವಂತೆ ಆಗ್ರಹಿಸಿ ಕೋಲಾರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಶಾಸಕಿ ರೂಪಾ ಶಶಿಧರ್ ಅವರು ತಮ್ಮ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.

ಕಾಮಗಾರಿಗೆ ವೇಗ ನೀಡಿ ಶೀಘ್ರದಲ್ಲೇ ಮುಕ್ತಾಯಗೊಳಿಸುವ ಕುರಿತು ಕೋಲಾರ ಜಿಲ್ಲಾಡಳಿತದಿಂದ ಆಶ್ವಾಸನೆ ದೊರೆತ ಹಿನ್ನಲೆಯಲ್ಲಿ ರೂಪಾ ಶಶಿಧರ್ ಅವರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.

ಕೋಲಾರದ ಕೆಜಿಎಫ್​​ ನಗರದಲ್ಲಿ ರಸ್ತೆ ಕಾಮಗಾರಿ ಸಂಬಂಧ ಇಂದು ಬೆಳಿಗ್ಗೆ ಕೋಲಾರ ಡಿಸಿ ಕಚೇರಿ ಎದುರು ಶಾಸಕಿ ರೂಪಾ ಶಶಿಧರ್​​ ಏಕಾಂಗಿಯಾಗಿ ನಿಂತು ಪ್ರತಿಭಟನೆ ನಡೆಸಿದರು. ಕೆಜಿಎಫ್​​ನ ಅಶೋಕ ನಗರ, ಎಂಜಿ ರಸ್ತೆ ಕಾಮಗಾರಿ ಶುರು ಮಾಡುವಂತೆ ಆಗ್ರಹಿಸಿದರು. ಕೈಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್  ಹಾಗೂ ಮಹಾತ್ಮ ಗಾಂಧೀಜಿ ಅವರ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ್ದ ಶಾಸಕಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೇ ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ರೂಪಾ ಶಶಿಧರ್ ಅವರು​​, ರಸ್ತೆ ಕಾಮಗಾರಿ ಸಮಸ್ಯೆಯನ್ನು ಜಿಲ್ಲಾಡಳಿತ ಗಂಭೀರವಾಗಿ  ತೆಗೆದುಕೊಳ್ಳುತ್ತಿಲ್ಲ. ಇದು ಸರ್ಕಾರ ಮತ್ತು ನ್ಯಾಯಲಯ ಹಂತದ ಕಾಮಗಾರಿಯಲ್ಲ. ಬದಲಿಗೆ ಜಿಲ್ಲಾಡಳಿತ ಹಂತದಲ್ಲಿರುವ ಕಾಮಗಾರಿ, ಹೀಗಾಗಿ ಕೂಡಲೇ ಪ್ರರಂಭಿಸಬೇಕು ಎಂದು ಆಗ್ರಹಿಸಿದರು. 

'ರಸ್ತೆ ಕಾಮಗಾರಿ ಸಂಬಂಧ ಒಬ್ಬ ಶಾಸಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೇ ಯಾವುದೇ ರೀತಿ ಕ್ರಮ ಜರುಗಿಸುತ್ತಿಲ್ಲ. ನಾನೋರ್ವ ಜನ ಪ್ರತಿನಿಧಿಯಾಗಿ ಒಂದು ಸಣ್ಣ ರಸ್ತೆ ಕಾಮಗಾರಿ ಮಾಡಿಸೋಕೆ ಆಗಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನ ಸಮಸ್ಯೆ ಎದುರಿಸುತ್ತಿದ್ಧಾರೆ. ಈ ಕಾಮಗಾರಿಗೆ  ಬಲಾಡ್ಯರು ಅಡ್ಡಪಡಿಸುತ್ತಿದ್ದಾರೆ. ಈ ಕಾಮಗಾರಿಗಾಗಿ ಜನ ಮನೆ ಕಳೆದುಕೊಂಡು ಸಮಸ್ಯೆಗೀಡಾಗಿದ್ಧಾರೆ. ಈ ಕೂಡಲೇ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಈ ರಸ್ತೆ ಕಾಮಗಾರಿ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದೇ ಹೋದಲ್ಲಿ ವಿಧಾನಸಭಾ ಕಲಾಪ ಬಹಿಷ್ಕರಿಸಿ ಹೋರಾಟ ಮುಂದುವರಿಸುತ್ತೇನೆ ಎಂದು  ರೂಪಾ ಶಶಿಧರ್​ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ವೇಳೆ ರೂಪಾ ಅವರು ಉಪ ಆಯುಕ್ತ ಸತ್ಯಭಾಮಾ ಅವರೊಂದಿಗೆ ವಾಗ್ವಾದ ಕೂಡ ನಡೆಸಿದರು. ಬಳಿಕ ಜಿಲ್ಲಾಡಳಿತ ಕಾಮಗಾರಿಗೆ ಪ್ರಾಶಸ್ತ್ಯ ನೀಡಿ ಶೀಘ್ರದಲ್ಲೇ ಪೂರ್ಣಗೊಳಿಸುವ ಕುರಿತು ಆಶ್ವಾಸನೆ ನೀಡಿದ ಹಿನ್ನಲೆಯಲ್ಲಿ ಅವರು ತಮ್ಮ ಪ್ರತಿಭಟನೆ ವಾಪಸ್ ಪಡೆದರು.

ಕೆಜಿಎಫ್​​ ನಗರದ ಸ್ಕೂಲ್ ಮೈನ್ಸ್​ನಿಂದ ಗಾಂಧಿ ಸರ್ಕಲ್​ವರೆಗೂ 1.8 ಕಿಲೋ ಮೀಟರ್​ ರಸ್ತೆ ಅಗಲೀಕರಣ ಮಾಡಲು ಜಿಲ್ಲಾಡಳಿತ ನಿರ್ಧರಿಸಿತ್ತು. ಹೀಗಾಗಿ 2013ರಲ್ಲೇ ಮಾಜಿ ಶಾಸಕ ವೈ ಸಂಪಂಗಿ ಅವಧಿಯಲ್ಲೇ ರಸ್ತೆ ತೆರವು ಕಾರ್ಯಾಚರಣೆ ನಡೆದಿತ್ತು. ಅನುಮತಿ ಪಡೆಯದೇ ತೆರವು ಕಾರ್ಯಾಚರಣೆ  ಮಾಡಲಾಗದು ಎಂದು ಪೊಲೀಸರು ಮಧ್ಯಪ್ರವೇಸಿದ್ದರು. ಹೀಗಾಗಿ ರಸ್ತೆ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com