ಹೆಸರಾಂತ ಕಥೆಗಾರ ಅಬ್ಬಾಸ್ ಮೇಲಿನಮನಿ ಇನ್ನಿಲ್ಲ

ನಾಡಿನ ಹಿರಿಯ ಸಾಹಿತಿ, ಹೆಸರಾಂತ ಕಥೆಗಾರ ಪ್ರೊ, ಅಬ್ಬಾಸ್ ಮೇಲಿನಮನಿ(66) ಇಂದು ತೀವ್ರ ಹೃದಯಾಘಾತದಿಂದ ದಾವಣಗೆರೆಯಲ್ಲಿ ನಿಧನ ಹೊಂದಿದ್ದಾರೆ. ಅಬ್ಬಾಸ್ ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಅಬ್ಬಾಸ್
ಅಬ್ಬಾಸ್

ಬಾಗಲಕೊಟೆ: ನಾಡಿನ ಹಿರಿಯ ಸಾಹಿತಿ, ಹೆಸರಾಂತ ಕಥೆಗಾರ ಪ್ರೊ, ಅಬ್ಬಾಸ್ ಮೇಲಿನಮನಿ(66) ಇಂದು ತೀವ್ರ ಹೃದಯಾಘಾತದಿಂದ ದಾವಣಗೆರೆಯಲ್ಲಿ ನಿಧನ ಹೊಂದಿದ್ದಾರೆ. ಅಬ್ಬಾಸ್ ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

ನಾಡಿನ ಜನಪ್ರಿಯ ಕಥೆಗಾರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಬಾಗಲಕೋಟೆಯ ಕಥೆಗಾರ ಅಬ್ಬಾಸ್ ಮೇಲಿನಮನಿ ಅವರು, ಮೌಲ್ಯಗಳ ಬಿತ್ತುವ ಕಾಯಕವನ್ನು ತಮ್ಮ ಸಂವೇದನಶೀಲ ಕಥೆಗಳ ಮೂಲಕ ಮಾಡುತ್ತಾ ಬಂದಿದ್ದ ಅವರೊಬ್ಬ ವಿಶಿಷ್ಟವಾದ ಸಂವೇದನಶೀಲ ಕತೆಗಾರರಾಗಿದ್ದರು.

ಮೂಲತ: ಬಾಗಲಕೋಟೆಯವರಾದ ಅಬ್ಬಾಸ್ ಮೇಲಿನಮನಿ ಅವರು, 1954 ಮಾರ್ಚ ೫ರಂದು ಜನಿಸಿದ್ದರು. ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು.

ಸಾಹಿತ್ಯ ಕೃಷಿ: ನೇರ, ನಿಷ್ಠುರತೆಯ ಸ್ವಭಾವ ಹೊಂದಿದ ಅಬ್ಬಾಸ್ ಮೇಲಿನಮನಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಹೆಸರು ಗಳಿಸಿದವರು. ಯಾವುದೇ  ಅಗ್ಗದ ಪ್ರಚಾರದ ಹಿಂದೆ ಬೀಳದ ಅವರು, ಇದ್ದದನ್ನು ಇದ್ದ ಹಾಗೇ ನೇರವಾಗಿ ಹೇಳುವ ಎದೆಗಾರಿಕೆ ಹೊಂದಿದ ನಿಷ್ಠುರತೆಗೆ ಹೆಸರಾದ ಕತೆಗಾರಾಗಿ ಗುರುತಿಸಿಕೊಂಡು ಸಾಹಿತ್ಯದ ಕೃಷಿಯನ್ನು ಮಾಡಿದ್ದಾರೆ.  
ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಾದಂಬರಿಗಳು: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ, ಸಂಪಾದಿತ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು ಅವರ ಕಥಾ ಸಂಕಲನಗಳಾಗಿವೆ.

ಪ್ರಶಸ್ತಿ-ಪುರಷ್ಕಾರಗಳು: ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಶಿವಮೊಗ್ಗ ಕ.ಸ.ಪ. ಲಂಕೇಶ್ ಕಥಾ ಪ್ರಶಸ್ತಿ, ತುಷಾರ ಎಚ್.ಎಂ.ಟಿ. ಅತ್ಯುತ್ತಮ ಕಥಾ ಪ್ರಶಸ್ತಿಗಳು ಲಭಿಸಿವೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯರಾಗಿದ್ದರು.

ಪ್ರತಿಮೆ, ಆಕೃತಿಗಳನ್ನು ಕಟ್ಟಿಕೊಡುವುದನ್ನು ಇವರು ಕತೆಗಳ ಮೂಲಕ ಮಾಡಿದ್ದಾರೆ. ಹಿಂದೂ, ಮುಸ್ಲಿಂ ಸಮುದಾಯಗಳ ಸಾಮಾಜಿಕ ಸಂಬಂಧಗಳನ್ನು, ಅದರ ಸಂವೇದನೆಗಳನ್ನು ಅಬ್ಬಾಸ್‌ರ ಕಥೆಗಳು ಕಟ್ಟಿಕೊಡುತ್ತವೆ. ಒಂದು ಸಮಾಂತರದ ನೆಲೆಯಲ್ಲಿ ನಿಂತು ಧ್ಯಾನಸ್ಥನಾಗಿ ಕಾಣುವ ಪರಿ ಅನನ್ಯವಾಗಿದೆ.

ವರದಿ: ವಿಠ್ಠಲ ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com