ಮತ್ತೆ ಮಳೆ ಆರ್ಭಟ: ದಕ್ಷಿಣ ಕನ್ನಡದಲ್ಲಿ 1 ಸಾವು, ಉಡುಪಿ ಸೇರಿದಂತೆ ಹಲವೆಡೆ ಪ್ರವಾಹ, 7 ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್'

ಕಳೆದ ಕೆಲ ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯನ ಅಬ್ಬರ ಮತ್ತೆ ಮುಂದುವರೆದಿದ್ದು, ಕರ್ನಾಟಕದ ಹಲವೆಡೆ ಭಾನುವಾರ ಭಾರಿ ಮಳೆಯಾದ ಪರಿಣಾಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 
ಕರ್ನಾಟಕದಲ್ಲಿ ಮಳೆ ಅಬ್ಬರ
ಕರ್ನಾಟಕದಲ್ಲಿ ಮಳೆ ಅಬ್ಬರ

ಬೆಂಗಳೂರು: ಕಳೆದ ಕೆಲ ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯನ ಅಬ್ಬರ ಮತ್ತೆ ಮುಂದುವರೆದಿದ್ದು, ಕರ್ನಾಟಕದ ಹಲವೆಡೆ ಭಾನುವಾರ ಭಾರಿ ಮಳೆಯಾದ ಪರಿಣಾಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಪ್ರಮುಖವಾಗಿ ಜ್ಯದ ಕರಾವಳಿ, ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಭಾನುವಾರ ಧಾರಾಕಾರ ಮಳೆ ಆಗಿದೆ. ಭಾರಿಮಳೆಗೆ ಉಡುಪಿ ನಗರ, ಜಿಲ್ಲೆಯ ಕೆಲ ಪ್ರದೇಶಗಳು ನಲುಗಿ ಹೋಗಿವೆ. ಹಲವೆಡೆ ಭೂಕುಸಿತದಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಉಡುಪಿ ನಗರ ದ್ವೀಪದಂತಾಗಿದ್ದು,ಹಲವು ಬಡಾವಣೆಗಳು  ಭಾಗಶಃ ಮುಳುಗಡೆಯಾಗಿವೆ. ಬ್ರಹ್ಮಾವರ, ಕಾಪುತಾಲ್ಲೂಕುಗಳಲ್ಲೂ ಧಾರಾಕಾರ ಮಳೆಯಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರಿ ಮಳೆ ಸುರಿದಿದೆ. ಕೊಡಗು ಜಿಲ್ಲೆಯ ಭಾಗಮಂಡಲಮತ್ತೆ ಜಲಾವೃತಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆ ಆಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲೂ  ಉತ್ತಮ ಮಳೆ ಆಗಿದೆ. 

ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲ್ಲೂಕಿನ ಹೆಚ್ಚಿನ ಗ್ರಾಮಗಳು ಜಲಾವೃತಗೊಂಡಿದ್ದು, ಶನಿವಾರ ಮಧ್ಯರಾತ್ರಿ ಅಗ್ನಿಶಾಮಕ ಸಿಬ್ಬಂದಿ, ಕೋಸ್ಟ್‌ಗಾರ್ಡ್ ಹಾಗೂ ಸ್ಥಳೀಯರು ದೋಣಿಗಳನ್ನು ಬಳಸಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಿದರು. ಭಾನುವಾರ ಬೆಳಿಗ್ಗೆ ಮಂಗಳೂರಿನಿಂದ ಬಂದ ಎನ್‌ಡಿಆರ್‌ಎಫ್‌  ತಂಡ, ನೆರೆಯಲ್ಲಿ ಸಿಲುಕಿದ್ದ 785 ಕುಟುಂಬಗಳ 2,874 ಜನರನ್ನು ರಕ್ಷಿಸಿದೆ. ಜಿಲ್ಲೆಯಲ್ಲಿ 1,201 ಜನರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಉಡುಪಿ– ಶಿವಮೊಗ್ಗ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 169 ಎ ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್‌ ಆಗಿತ್ತು. ಉಡುಪಿಯ ಕೃಷ್ಣಮಠ ಹಾಗೂ ಹಿರಿಯಡ್ಕ  ಸಮೀಪದ ಪುತ್ತಿಗೆ ಮಠ ಜಲಾವೃತಗೊಂಡಿವೆ. 

ಆಗಸ್ಚ್ ನಲ್ಲಿ 8 ಸಾವಿರ ಕೋಟಿ ರೂ ನಷ್ಟ
ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯಕ್ಕೆ ಆಗಸ್ಟ್ ನಲ್ಲಿ 8 ಸಾವಿರ ಕೋಟಿ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ 35 ಸಾವಿರ ಕೋಟಿ ರೂ ನಷ್ಟವಾಗಿತ್ತು.

ದಕ್ಷಿಣ ಕನ್ನಡದಲ್ಲಿ 1 ಸಾವು
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟಿಸುತ್ತಿದ್ದು, ಸರಿಪಳ್ಳದಲ್ಲಿ ಮನೆ ಕುಸಿದು ಇಬ್ಬರಿಗೆ ಗಾಯವಾಗಿದೆ. ವಿಟ್ಲ ಸಮೀಪದ ಬನಾರಿ ಬಾಬಟ ಪ್ರದೇಶ ದಲ್ಲಿ ಗುಡ್ಡ ಕುಸಿದು ಮನೆ ನೆಲಸಮವಾಗಿದ್ದು, ಮಣ್ಣಿನಡಿ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ.

ಕೊಡಗು ಜಿಲ್ಲೆ ಯಲ್ಲೂ ಮಳೆಯ ಅಬ್ಬರ ಮುಂದು ವರಿದಿದೆ. ಭಾಗಮಂಡಲ ಮತ್ತೆ ಜಲಾವೃತಗೊಂಡಿದೆ. ಕೇರಳದಲ್ಲಿ ಭಾರಿ ಮಳೆ ಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಕೆಆರ್‌ಎಸ್‌ ಜಲಾಶಯಕ್ಕೆ ಹರಿದು  ಬರುತ್ತಿರುವ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಭದ್ರಾ ಜಲಾಶಯದಿಂದ 60 ಸಾವಿರ ಕ್ಯುಸೆಕ್‌ ನೀರು ಬಿಡು ಗಡೆ: ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ್ಗೆ ಜೋರು ಮಳೆಯಾಗುತ್ತಿದ್ದು, ಭದ್ರಾ ಜಲಾಶಯದಿಂದ ನೀರಿನ ಹೊರಹರಿವು ಹೆಚ್ಚಿದೆ. ಭಾನುವಾರ 60 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಭದ್ರಾ  ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಭದ್ರಾವತಿಯ ಹೊಸ ಸೇತುವೆ ಮುಳುಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಶಿವಮೊಗ್ಗದ ಹಲವೆಡೆ ಸಾಧಾರಣ ಮಳೆಯಾಗಿದೆ. ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ.  ತಾಲ್ಲೂಕಿನ ಕೆಲವೆಡೆ ಧರೆ ಕುಸಿತದ ಭೀತಿ ಎದುರಾಗಿದೆ. ಉತ್ತರ ಕನ್ನಡ, ಬೆಳಗಾವಿ, ಕಲಬುರ್ಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. 

7 ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಮುಂದುವರಿಕೆ
ಇನ್ನು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಈ ಜಿಲ್ಲೆಗಳಲ್ಲಿ ಸೆ.21 ರವರೆಗೆ 'ರೆಡ್ ಅಲರ್ಟ್' ಮುಂದುವರಿಸಲಾಗಿದೆ. ಕರಾವಳಿ, ದಕ್ಷಿಣ  ಒಳನಾಡಿನ ಜಿಲ್ಲೆಗಳಲ್ಲಿ ಸೆ.23 ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕೇರಳದ ಕಾಸರಗೋಡು, ಕಣ್ಣೂರು, ಮಲಪ್ಪುರಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಿಸಿದೆ.

TB ಡ್ಯಾಂನಿಂದ ನೀರು ಬಿಡುಗಡೆ
ಇತ್ತ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಾಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಹಾಗಾಗಿ, ತುಂಗಭದ್ರಾ ಜಲಾಶಯದಿಂದ ಸುಮಾರು 65,448 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಜಲಾಶಯದ 28 ಗೇಟ್​ಗಳ ಮ‌ೂಲಕ ತುಂಗಭದ್ರಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹಲವರು ಇಲ್ಲಿ ಬರುತ್ತಿದ್ದಾರೆ. ಈ ನಡುವೆ, ತುಂಗಾಭದ್ರಾ ನದಿ ಪಾತ್ರದ ಜನರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಒಳಹರಿವಿನ ಪ್ರಮಾಣ ನಾಳೆಯೂ ಮತ್ತಷ್ಟು  ಹೆಚ್ಚಳವಾಗುವ ಸಾಧ್ಯತೆಯಿದ್ದು ಯಾವುದೇ ಕ್ಷಣಾದಲ್ಲೂ ನದಿಗೆ ಮತ್ತಷ್ಟು ನೀರು ಬಿಡುವ ಪರಿಸ್ಥಿತಿಯಿದೆ. ಆದ್ದರಿಂದ, ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ವಹಿಸಲು TB ಡ್ಯಾಂ ಬೋರ್ಡ್ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com