ವಿಧಾನಸಭೆಯಲ್ಲಿ 2018-19ನೇ ಸಾಲಿನ ಲೆಕ್ಕಪರಿಶೋಧನಾ ಸಮಿತಿ ವರದಿ ಸೇರಿದಂತೆ ವಿವಿಧ ವಿಧೇಯಕಗಳ ಮಂಡನೆ

ರಾಜ್ಯದ ವಿಧಾನಮಂಡಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಭಾರತ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು ನೀಡಿರುವ ವರದಿಗಳು, ಧನ ವಿನಿಯೋಗ ಹಾಗೂ ಹಣಕಾಸು ಲೆಕ್ಕಗಳ ಪರಿಶೋಧನಾ ವರದಿಗಳು, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ, ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕ ಸೇರಿದಂತೆ ಹತ್ತಕ್ಕೂ ಹೆಚ್ಚು ವಿಧೇಯಕಗಳನ್ನ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯದ ವಿಧಾನಮಂಡಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಭಾರತ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು ನೀಡಿರುವ ವರದಿಗಳು, ಧನ ವಿನಿಯೋಗ ಹಾಗೂ ಹಣಕಾಸು ಲೆಕ್ಕಗಳ ಪರಿಶೋಧನಾ ವರದಿಗಳು, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ, ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕ ಸೇರಿದಂತೆ ಹತ್ತಕ್ಕೂ ಹೆಚ್ಚು ವಿಧೇಯಕಗಳನ್ನ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಲೆಕ್ಕ ಪರಿಶೋಧನಾ ವರದಿ ಸೇರಿದಂತೆ ವಿವಿಧ ವರದಿಗಳು, ಚುನಾವಣಾ ಪ್ರಸ್ತಾವನೆ, ವಿಧೇಯಕ ಹಿಂಪಡೆಯುವುದು ಸೇರಿದಂತೆ ಹಲವಾರು ಕಾಗದ ಪತ್ರಗಳನ್ನು ಸಭೆಯ ಮುಂದೆ ಮಂಡಿಸಲಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ನೀಡಿರುವ 2018-19ನೇ ಸಾಲಿನ ಧನವಿನಿಯೋಗ ಮಸೂದೆ, ಹಣಕಾಸು ಲೆಕ್ಕಗಳ ವರದಿಯನ್ನು ಸಭೆಯ ಮುಂದಿಟ್ಟರು. ಮಾರ್ಚ 2019ಕ್ಕೆ ಕೊನೆಗೊಂಡ ವರ್ಷದಲ್ಲಿ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಸಭೆಯ ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದರು.

ಬಿಬಿಎಂಪಿ ವಿಧೇಯಕ ಪರಿಶೀಲನಾ ಸಮಿತಿ ಅಧ್ಯಕ್ಷರಾದ ಎಸ್.ರಘು 2020ನೇ ಸಾಲಿನ ಬಿಬಿಎಂಪಿ ಜಂಟಿ ಪರಿಶೀಲನಾ ಸಮಿತಿಯ ಮಧ್ಯಂತರ ವರದಿಯನ್ನು ಸಭೆಯ ಮುಂದೆ ಮಂಡಿಸಿದರು. 2019-20ನೇ ಸಾಲಿನ ವಿಧಾನ ಸಭೆ ಹಕ್ಕುಬಾದ್ಯತಾ ಸಮಿತಿ ಮೊದಲ ವರದಿ, ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ 32ನೇ ವರದಿ, ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಎರಡನೆ ವರದಿಯನ್ನು ಸಭೆಯ ಮುಂದೆ ಮಂಡಿಸಲಾಯಿತು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಲೋಕಾಯುಕ್ತ ವಿಧೇಯಕ, ಪಟ್ಟಣ ಗ್ರಾಮಾಂತರ ವಿಧೇಯಕ, ಸಾರ್ವಜನಿಕ ನಾಗರಿಕ ಸೇವೆಗಳ ವಿಧೇಯಕಗಳನ್ನ ಮಂಡಿಸಿದರು. ಡಿಸಿಎಂ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಕಂದಾಯ ಸಚಿವ ಆರ್ ಅಶೋಕ್,ಆರೋಗ್ಯ ಸಚಿವ ಬಿ ಶ್ರೀರಾಮುಲು, ಜಗದೀಶ್ ಶೆಟ್ಟರ್ ತಮ್ಮ ಇಲಾಖೆಗಳ ವಿಧೇಯಕಗಳನ್ನ ಮಂಡನೆ ಮಾಡಿದರು.

ಅಂತೆಯೇ 2015ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕವನ್ನು ಹಿಂಪಡೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸಿದರು. ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರು ಚುನಾವಣಾ ಪ್ರಸ್ತಾವನೆಯನ್ನು ಸಭೆಯ ಮುಂದೆ ಮಂಡಿಸಿದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ 15 ಜನರನ್ನು, ಅಂದಾಜುಗಳ ಸಮಿತಿಗೆ 18 ಜನರನ್ನು, ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ 15 ಜನರನ್ನು, ಹಕ್ಕುಭಾದ್ಯತಾ ಸಮಿತಿಗೆ 9 ಜನರನ್ನು, ಅಧೀನಾ ಶಾಸನ ರಚನಾ ಸಮಿತಿಗೆ, ಸರ್ಕಾರಿ ಭರವಸೆಗಳ ಸಮಿತಿಗೆ, ಖಾಸಗಿ ವಿಧೇಯಕಗಳ ಸಮಿತಿಗೆ, ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಗೆ, ಹಿಂದುಳಿದ ವರ್ಗಗಳ ಸಮಿತಿಗೆ, ಸೌಕರ್ಯ ಸಮಿತಿಗೆ ಸದಸ್ಯರನ್ನು ನೇಮಿಸುವ ಪ್ರಸ್ತಾವನೆಯನ್ನು ಸಭೆಯ ಮುಂದಿಟ್ಟರು.

ವಿಧಾನ ಸಭೆ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020ನೇ ಸಾಲಿನ ಕರ್ನಾಟಕ ಲೋಕಾಯುಕ್ತ(ಎರಡನೇ ತಿದ್ದುಪಡಿ)ವಿಧೇಯಕ, 2020ರ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ವಿಧೇಯಕ ,2020ರ ಸಾರ್ವಜನಿಕ ಸಿವಿಲ್ ಸೇವೆಗಳ ವಿಧೇಯಕಗಳನ್ನು ಸದನದಲ್ಲಿ ಮಂಡಿಸಿದರು.

2020ರ ಕರ್ನಾಟಕ ಭಿಕ್ಷಾಟನೆ ನಿಷೇಧ ತಿದ್ದುಪಡಿ ವಿಧೇಯಕ ಹಾಗೂ 2020ರ ಕರ್ನಾಟಕ ವಿವಿ ಮತ್ತು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕವನ್ನು ಡಿಸಿಎಂ ಅಶ್ವತ್ಥ ನಾರಾಯಣ್ ಪರವಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸದನದಲ್ಲಿ ಮಂಡಿಸಿದರು. 2020ರ ಮುಕ್ತ ವಿವಿ ತಿದ್ದುಪಡಿ ವಿಧೇಯಕ‌, 2020ರ ಪೌರಸಭೆಗಳ ತಿದ್ದುಪಡಿ ವಿಧೇಯಕ, 2020ರ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕವನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು. ವಿವಾದಿತ 2020ರ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನು ಕಂದಾಯ ಸಚಿವ ಆಶೋಕ್ ಅವರಿಂದ ಮಂಡಿಸಿದರೆ, ಕೈಗಾರಿಕಾ ಸೌಲಭ್ಯಗಳ ತಿದ್ದುಪಡಿ ವಿಧೇಯಕ‌ವನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಂದ ಮಂಡಿಸಿದರು. ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ, ರಾಜ್ಯ ಸಾಂಕ್ರಾಮಿಕ ರೋಗಗಳ ವಿಧೇಯಕ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಸಚಿವ ನಾರಾಯಣಗೌಡ ಅವರು ಪೌರ ಸಭೆಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com