ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ 2 ಪ್ರಕರಣ ತನಿಖೆ ಎನ್ಐಎ ಸುಪರ್ದಿಗೆ

ನಗರದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಐಜಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ದಳದ ವಿಶೇಷ ತಂಡವು ಮಂಗಳವಾರದಿಂದ ಅಧಿಕೃತವಾಗಿ ತನಿಖೆ ಆರಂಭಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಐಜಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ದಳದ ವಿಶೇಷ ತಂಡವು ಮಂಗಳವಾರದಿಂದ ಅಧಿಕೃತವಾಗಿ ತನಿಖೆ ಆರಂಭಿಸಿದೆ. 

ಈ ಪ್ರಕರಣದ ಬಂಧಿತ ಸುಮಾರು 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎನ್ಐಎ ತನಿಖೆಗೆ ವಹಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿತು. ಅದರ ಅನ್ವಯ ಎನ್ಐಎ ತನಿಖೆಗೆ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿತು. ಇದಕ್ಕೂ ಮುನ್ನ ತನಿಖೆ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಕೂಡ ಸೋಮವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿತು. ಗಲಭೆಯಲ್ಲಿ ಪೊಲೀಸರ ಗುಂಡಿನ ದಾಳಿ ಕುರಿತು ದಾಖಲಾಗಿದ್ದ ಎಫ್ಐಆರ್'ಗಳು ಮಾತ್ರ ಎನ್ಐಎ ತನಿಖೆ ನಡೆಸಲಿದೆ. 

ಕೇಂದ್ರ ಗೃಹ ಸಚಿವಾಲಯದ ಆದೇಶದ ಅನ್ವಯ ಡಿಜೆ ಹಳ್ಳಿ-ಕೆಜಿ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಸಂಬಂಧ 2 ಎಫ್ಐಆರ್ಗಳನ್ನು ದಾಖಲಿಸಲಾಗಿದೆಯ ಐಜಿಪಿ ಮಟ್ಟದ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರಿನಲ್ಲೇ ಕ್ಯಾಂಪ್ ಮಾಡಿ ತನಿಖಾ ಉಸ್ತುವಾರಿ ನಡೆಸಲಿದ್ದಾರೆಂದು ಎನ್ಐಎ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. 

ಫೇಸ್'ಬುಕ್ ನಲ್ಲಿ ಇಸ್ಲಾಂ ಧರ್ಮಗುರು ಮೊಹಮ್ಮದ್ ಪೈಗಂಬರ್ ಬಗ್ಗೆ ಆ.11ರಂದು ಸೋಮವಾರ ರಾತ್ರಿ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರ ಸಂಬಂಧಿ ನವೀನ್ ವಿವಾದಾತ್ಮಕ ಪೊಸ್ಟ್ ಮಾಡಿದ್ದ. ಇದನ್ನು, ಖಂಡಿಸಿ ಕಿಡಿಗೇಡಿಗಳು, ಶಾಸಕರ ಮನೆ ಮತ್ತು ಕಚೇರಿ, ನವೀನ್ ಮನೆ, ಡಿ.ಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಠಾಣೆಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. 

ಗಲಭೆ ಹಿಂದೆ ಎಸ್'ಡಿಪಿಐ ಕೈವಾಡವು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಎಸ್'ಡಿಪಿಐ ರಾಜ್ಯ ಕಾರ್ಯದರ್ಶಿ ಮುಂಜಾಮಿಲ್ ಪಾಷ. 20 ಜನ ಪ್ರಮುಖ ಮುಖಂಡರು ಸೇರಿದಂತೆ 380 ಕ್ಕೂ ಹೆಚ್ಚಿನ ಆರೋಪಿಗಳು ಬಂಧಿತರಾಗಿದ್ದರು. ಸುಮಾರು 40 ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಸಿಸಿಬಿ ತನಿಖೆಯಲ್ಲಿ ಪತ್ತೆಯಾಗಿತ್ತು. 

ಎನ್ಐಎ ತನಿಖೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದಿರುವ ಸಿಎಂ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com