ತೆರಕಣಾಂಬಿ, ಹನೂರು ಕಾಲೇಜುಗಳ ಮುಂದುವರಿಕೆಗೆ ಕಾಲೇಜು ಶಿಕ್ಷಣ ಇಲಾಖೆ ಆದೇಶ

ಹನೂರು ತಾಲೂಕಿನ ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರವರ ಕೋರಿಕೆಯಂತೆ ಅದೇ ಸ್ಥಳಗಳಲ್ಲಿ ಮುಂದುವರೆಸಲಾಗಿದೆ. 
ತೆರಕಣಾಂಬಿ ಕಾಲೇಜು
ತೆರಕಣಾಂಬಿ ಕಾಲೇಜು

ಚಾಮರಾಜನಗರ: ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳ ಕೊರತೆಯಿಂದ ಬೇರೆ ಜಿಲ್ಲೆಗೆ  ಸ್ಥಳಾಂತರಗೊಂಡ ಜಿಲ್ಲೆಯ ಹನೂರು ತಾಲೂಕಿನ ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರವರ ಕೋರಿಕೆಯಂತೆ ಅದೇ ಸ್ಥಳಗಳಲ್ಲಿ ಮುಂದುವರೆಸಲಾಗಿದೆ. 

ಜಿಲ್ಲೆಯ ಎರಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ವಿದ್ಯಾರ್ಥಿಗಳ ಕೊರತೆಯ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗಿತ್ತು. ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳಿಲ್ಲದಿದ್ದರೂ  ಗಡಿ ಪ್ರದೇಶದ ಜಿಲ್ಲೆಯ  ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜುಗಳನ್ನು ಮುಂದುವರೆಸಬೇಕೆಂದು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಸುರೇಶ್ ಕುಮಾರ್ ಹಾಗೂ ಗುಂಡ್ಲುಪೇಟೆ ಶಾಸಕರಾದ ನಿರಂಜನ್ ಕುಮಾರ್ ರವರು ಮನವಿ ಸಲ್ಲಿಸಿದ್ದರು. ಎರಡೂ ಕಾಲೇಜುಗಳನ್ನು ಅದೇ ಸ್ಥಳಗಳಲ್ಲಿ ಮುಂದುವರೆಸಲು ಸಮ್ಮತಿಸಿದ್ದು, ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.  

ತೆರಕಣಾಂಬಿ ಪ್ರಥಮ ದರ್ಜೆ ಕಾಲೇಜನ್ನು ಮೈಸೂರು ವಿಶ್ವವಿದ್ಯಾನಿಲಯವು ಘಟಕ ಕಾಲೇಜಾಗಿ  ಪಡೆದುಕೊಂಡಿದ್ದು, ಕಾಲೇಜು   ಅಭಿವೃದ್ಧಿಗೆ ಹೆಚ್ಚಿನ ಅವಕಾಶವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಮ್ಮ  ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ವಿವಿಧ ಸಂಘ ಸಂಸ್ಥೆಗಳು, ರೈತ ಸಂಘಟನೆಗಳು ನನ್ನಲ್ಲಿ  ಮನವಿ ಮಾಡಿ ಸದರಿ ಕಾಲೇಜುಗಳನ್ನು ಇಲ್ಲಿಯೇ ಮುಂದುವರೆಸಬೇಕೆಂದು ಕೋರಿದ್ದರು. ಎರಡು ಕಾಲೇಜುಗಳನ್ನು ಅದೇ ಸ್ಥಳದಲ್ಲಿ ಮುಂದುವರೆಸಲು ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ತೆರಕಣಾಂಬಿ ಕಾಲೇಜನ್ನು ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡಿಸಿ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

ಈ ಭಾಗದ ವಿದ್ಯಾರ್ಥಿಗಳು ಕಾಲೇಜುಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಸಚಿವರು ಮನವಿ ಮಾಡಿದ್ದಾರೆ.

ವರದಿ: ಗುಳಿಪುರ ನಂದೀಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com