ಪೊಲೀಸ್‌ ಅಧಿಕಾರಿಗಳ ಹೆಸರಲ್ಲಿ ಫೇಸ್ ಬುಕ್ ನಕಲಿ ಖಾತೆ ಮೂಲಕ ಆನ್‌ಲೈನ್‌ ವಂಚನೆ

ವಂಚಕರು ತಮ್ಮ ಜಾಲ ವಿಸ್ತರಣೆ ಮಾಡಿದ್ದು, ಪೊಲೀಸ್ ಅಧಿಕಾರಿಗಳ ನಕಲಿ ಫೇಸ್ ಬುಕ್ ಖಾತೆ ಮೂಲಕ ಆನ್ ಲೈನ್ ವಂಚನೆ ಮಾಡುತ್ತಿದ್ದಾರೆ.
ವಂಚನೆ!
ವಂಚನೆ!

ಬೆಂಗಳೂರು: ವಂಚಕರು ತಮ್ಮ ಜಾಲ ವಿಸ್ತರಣೆ ಮಾಡಿದ್ದು, ಪೊಲೀಸ್ ಅಧಿಕಾರಿಗಳ ನಕಲಿ ಫೇಸ್ ಬುಕ್ ಖಾತೆ ಮೂಲಕ ಆನ್ ಲೈನ್ ವಂಚನೆ ಮಾಡುತ್ತಿದ್ದಾರೆ.

ಕರ್ನಾಟಕದ ಪ್ರಮುಖ ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರ ಮೂಲಕ ಹಣ ರವಾನೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಬಳಿಕ ಈ ಖಾತೆಗಳು ನಕಲಿ ಎಂಬುದು ತಿಳಿದುಬರುತ್ತಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ಹೆಸರಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಲಾಗುತ್ತಿದೆ. ಈ ರಿಕ್ವೆಸ್ಟ್ ನೋಡಿ ಇಷ್ಟು ದೊಡ್ಡ ಅಧಿಕಾರಿ ನನಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ ಎಂದು ಅದನ್ನು ಸ್ವೀಕರಿಸಿ ಅವರೊಂದಿಗೆ ಮೆಸೆಂಜರ್‌ನಲ್ಲಿ ಆತ್ಮೀಯ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ತನಗೆ ಸ್ವಲ್ಪ ತುರ್ತಾಗಿ ಹಣ ಬೇಕಾಗಿದೆ. ಬೇಗ ಕಳುಹಿಸಲು ಸಾಧ್ಯವೇ. ಆದಷ್ಟು ಬೇಗ ನಿಮಗೆ ಹಿಂದಿರುಗಿಸುತ್ತೇನೆ. ನೀವು ಫೋನ್‌ ಪೇ ಅಥವಾ ಗೂಗಲ್‌ ಪೇ ಮಾಡಿ ಎಂದು ಕೇಳಿದ್ದಾರೆ. ದೊಡ್ಡ ಅಧಿಕಾರಿ ಎಂದು ತಿಳಿದು ಹಣ ರವಾನೆ ಮಾಡಿದರೆ ನೀವು ಅವರ ಜಾಲಕ್ಕೆ ಸಿಲುಕಿದಂತೆಯೇ....!

ಒಮ್ಮೆ ಅವರಿಗೆ ಹಣ ಕಳುಹಿಸಿದರೆ ಅವರಿಂದ ಮತ್ತೆ ನಿಮ್ಮ ಹಣ ವಾಪಸ್ ಆಗುವುದಿಲ್ಲ. ಅಲ್ಲದೆ ಅವರಿಗೆ ಮಸೇಜ್ ಕಳುಹಿಸಿದರೆ ಅದರಿಂದ ರಿಪ್ಲೈ ಕೂಡ ಬರುವುದಿಲ್ಲ. ಬಳಿಕ ಖಾತೆಯನ್ನು ಪರಿಶೀಲಿಸಿದಾಗ ಅದು ನಕಲಿ ಖಾತೆ ಎಂಬುದು ತಿಳಿಯುತ್ತದೆ. ಇಂತಹ ಹಲವು ಪ್ರಕರಣಗಳು ದಾಖಲಾಗುತ್ತಿದ್ದು, ಇದೇ ವಿಚಾರವಾಗಿ ಇದೀಗ ಹಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಪೊಲೀಸ್ ಆಯುಕ್ತ (ಸಂಚಾರ), ಮೈಸೂರು- ಸಂದೇಶ್ ಕುಮಾರ್, ಲೋಕಾಯುಕ್ತ ಎಸ್ಪಿ- ಸ್ನೇಹಾ, ಕಾರವಾರ ಗ್ರಾಮೀಣ ಸಬ್ ಇನ್ಸ್‌ಪೆಕ್ಟರ್ ರೇವಣ್ಣಸಿದ್ದಪ್ಪ, ಸಿಂಧನೂರು ಗ್ರಾಮೀಣ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ, ಬಂಟ್ವಾಳಲ್ ಗ್ರಾಮೀಣ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ, ಕೌಲ್‌ ಬಜಾರ್ ಪೊಲೀಸ್ ಇನ್ಸ್‌ಪೆಕ್ಟರ್, ಬಳ್ಳಾರಿ, ನಿವೃತ್ತ ಡಿಸಿಪಿ ಮಹೇಶ್ವರಪ್ಪ, ಮತ್ತು ಅನೇಕರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ತನಿಖೆ ಮೂಲಕ ತಿಳಿದುಬಂದಿದೆ.

ಅಷ್ಟು ಮಾತ್ರವಲ್ಲದೇ ಈಗಾಗಲೇ ನಿಧನರಾದ ಪೊಲೀಸ್ ಅಧಿಕಾರಿಗಳ  ಹೆಸರಲ್ಲೂ ಫೇಸ್ ಬುಕ್ ಕಾತೆಗಳನ್ನುತೆರೆಯಲಾಗಿದೆ. ಕರಾವಳಿ ಭದ್ರತಾ ಪೊಲೀಸ್ ಅಧಿಕಾರಿ ಹರೀಶ್ ಚಂದ್ರ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಡಿಕೇರಿ ನಿವಾಸಿಯೊಬ್ಬರಿಗೆ ವಂಚಿಸಲಾಗಿದೆ. ಅಂತೆಯೇ ಬಹುತೇಕ ಪೊಲೀಸ್ ಅಧಿಕಾರಿಗಳು ಫೇಸ್ ಬುಕ್ ನಕಲಿ ಖಾತೆ ತೆರೆಯಲಾಗಿದ್ದು, ಇದರ ವಿರುದ್ಧ ಅಧಿಕಾರಿಗಳು ದೂರು ಸಲ್ಲಿಕೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳ ತನಿಖೆಯ ಮೂಲಕ ಹಲವು ಮಹತ್ತರ ವಿಚಾರಗಳು ತಿಳಿದುಬಂದಿದ್ದು, ವಂಚಕರು ಉತ್ತರ ಪ್ರದೇಶ, ಜಾರ್ಖಂಡ್, ಗುಜರಾತ್ ಮತ್ತು ಇತರೆ ಉತ್ತರ ಭಾರತದ ರಾಜ್ಯಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಣ ತಜ್ಞರೇ ವಂಚಕರ ಗುರಿ
ಇನ್ನು ವಂಚಕರಿಗೆ ಶಿಕ್ಷಣ ಕ್ಷೇತ್ರದ ಪ್ರಮುಖರೇ ಗುರಿಯಾಗುತ್ತಿದ್ದಾರೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರಮುಖರನ್ನು ಗುರಿಯಾಗಿಸಿಕೊಂಡು ವಂಚಕರು ವಂಚನೆ ಮಾಡುತ್ತಿದ್ದಾರೆ. ಮೈಸೂರು ವಿವಿಯ ಹಲವು ಪ್ರಾಧ್ಯಾಪಕರು ಇಂತಹ ವಂಚನೆಗೊಳರಾಗಿಗುರುವ ಪ್ರಕರಣಗಳು ವರದಿಯಾಗಿದೆ. 

ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ತಮ್ಮ ಅಧಿಕಾರಿಗಳಿಗೆ ಮುಂಜಾಗ್ರತಾ ಸೂಚನೆಗಳನ್ನು ರವಾನಿದ್ದು, ಫೇಸ್  ಬುಕ್ ನಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡದಂತೆ ಸೂಚನೆ ನೀಡಿದೆ. ಆ ಮೂಲಕ ವಂಚಕರು ತಮ್ಮ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಮುಂಜಾಗ್ರತೆ ವಹಿಸಿ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಬರ್ ಕ್ರೈಮ್ ಪೊಲೀಸರು ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಜಾಲದಲ್ಲಿರುವ ಹಲವರ ಮೇಲೆ ನಿಗಾ ಇಡಲಾಗಿದೆ. ಇತ್ತೀಚೆಗೆ ಪೊಲೀಸ್ ಅಧಿಕಾರಿಯ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇಂತಹ ಪ್ರಕರಣಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com