ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿಂದು ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿಂದು ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದೆ.

ನಿನ್ನೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಸಂತಾಪ ಸೂಚಿಸಿ ಮುಂದೂಡಲ್ಪಟ್ಟ ಕಲಾಪ ಮತ್ತೆ ಸಮಾವೇಶಗೊಂಡಾಗ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಯಮ 367ರಡಿ ನೋಟಿಸ್ ಕಳುಹಿಸಿದ್ದೇನೆ ಎಂದು ಸ್ಪೀಕರ್ ಗಮನಕ್ಕೆ ತಂದರು, ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷರು, ನೋಟಿಸ್ ತಲುಪಿದೆ ಎಂದು ಹೇಳಿದರು.

ಯಡಿಯೂರಪ್ಪನವರ ಮಂತ್ರಿಮಂಡಲದ ಮೇಲೆ ವಿಶ್ವಾಸವಿಲ್ಲ ನಮಗೆ, ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಆಗ ಸ್ಪೀಕರ್ ಅವಿಶ್ವಾಸ ನಿರ್ಣಯ ಮಂಡನೆಗೆ ಒಪ್ಪಿಗೆ ನೀಡಿದರು. ನಾವು ಮಂಡಿಸಿದ್ದೇವೆ ನೀವು ಸಮಯ ನಿಗದಿ ಮಾಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದಾಗ, ನಾಳೆ ಅಥವಾ ನಾಡಿದ್ದು ನಿಮಗೆ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಆರ್. ಅಶೋಕ್, ನಮಗೆ ಬಹುಮತವಿದೆ, ಇದು ರಾಜಕೀಯ ಗಿಮಿಕ್, ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ಶಾಸಕರೇ ನಮ್ಮ ಜೊತೆ ಇದ್ದಾರೆ. ಇನ್ನು ಕೆಲವರು ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. ಚರ್ಚೆಗೆ ಅವಕಾಶ ಕೊಡಬಾರದು ಎಂದು ಹೇಳುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಗದ್ದಲವೆಬ್ಬಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ಮಂಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೆ ಬೇಕಾದ ಸಂಖ್ಯೆ ಇದೆ. ಆದರೆ ಸಚಿವರು ಚರ್ಚೆಗೆ ಅವಕಾಶ ಕೊಡಬೇಡಿ ಎನ್ನುತ್ತಿದ್ದಾರೆ. ಅವಕಾಶ ಕೊಡಬೇಕಾದುದು ಸಭಾಧ್ಯಕ್ಷರು. ಅವಕಾಶ ಕೊಡಬೇಡಿ ಎನ್ನಲು ಅವರು ಯಾರು ? ಎಂದು ಅಶೋಕ್ ವಿರುದ್ಧ ಹರಿಹಾಯ್ದರು.

ಈ ಮಧ್ಯೆ ಎಚ್.ಕೆ.ಪಾಟೀಲ್ ಮಾತನಾಡಿ, ಈಗ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ನಿರ್ಣಯ ಮಂಡನೆಯಾದ ಮೇಲೆ ಯಾವುದೇ ಸರ್ಕಾರಿ ವಿಷಯ ಪ್ರಸ್ತಾಪವಾಗಬಾರದು. ರಾಜ್ಯವ್ಯಾಪಿ ಜರೂರು ವಿಷಯ ಬಿಟ್ಟು ಬೇರೆಯ ವಿಷಯಗಳಿಗೆ ಅವಕಾಶ ಕೊಡುವಂತಿಲ್ಲ. ಅವಕಾಶ ಕೊಟ್ಟು ಸದನದ ಗೌರವಕ್ಕೆ ಧಕ್ಕೆತರಬೇಡಿ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com