ಕೃಷಿ ಸಂಬಂಧಿತ ಮಸೂದೆಗೆ ವಿರೋಧ, ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಸೂದೆಗಳನ್ನು ವಿರೋಧಿಸಿ 35ಕ್ಕೂ ಅಧಿಕ ರೈತ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ನಡೆಸಿದವು.
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಸೂದೆಗಳನ್ನು ವಿರೋಧಿಸಿ 35ಕ್ಕೂ ಅಧಿಕ ರೈತ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ನಡೆಸಿದವು.

ಬೆಂಗಳೂರಿನ ಹೊರವಲಯ ಮತ್ತು ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ರೈತರು ರಸ್ತೆ ತಡೆ ನಡೆಸಿದರು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
ವಿವಿಧ ಸಂಘಟನೆಗಳು ಕೂಡ ಪ್ರತಿಭಟನೆಗೆ ಸಾಥ್ ನೀಡಿದವು. ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸುತ್ತಿದ್ದ ದೃಶ್ಯ ಮೈಸೂರು ಬ್ಯಾಂಕ್ ನಲ್ಲಿ ಕಂಡುಬಂತು. ಸರ್ಕಾರ ನಮ್ಮ ತಲೆ ಮೇಲೆ ಕಲ್ಲು ಹಾಕುತ್ತಿದೆ ಎಂದು ಆರೋಪಿಸಿ ವಿನೂತನ ಪ್ರತಿಭಟನೆ ನಡೆಸಿದರು.

ಮೈಸೂರು ಬ್ಯಾಂಕ್ , ಮೌರ್ಯ ವೃತ್ತದಲ್ಲಿ ನೂರಾರು ರೈತರು ಸೇರಿದ್ದರಿಂದ ಸುತ್ತಮುತ್ತಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಬೆಂಗಳೂರಿನ ಗೊರಗುಂಟೆ ಪಾಳ್ಯ, ನಾಯಂಡನಹಳ್ಳಿ, ಆನೇಕಲ್, ದೇವನಹಳ್ಳಿ ಮತ್ತಿತರ ಕಡೆಗಳಲ್ಲಿ ಹೆದ್ದಾರಿ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗೊರಗುಂಟೆಪಾಳ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಶಾಂತ ಕುಮಾರ್, ಹೊಟ್ಟೆಗೆ ಅನ್ನತಿನ್ನುವ ಯಾರು ಕೂಡ ರೈತರಿಗೆ ಮೋಸ ಮಾಡಲಾರರು. ರೈತ ವಿರೋಧಿಯಾಗಿರುವ ಮಸೂದೆಗಳನ್ನು ಜಾರಿಗೆ ತರುತ್ತಿರುವುದಕ್ಕೆ ಅವಕಾಶ ನೀಡುವುದಿಲ್ಲ. ಅದು ಕೂಡ ಚರ್ಚೆ ಇಲ್ಲದೆ ಅಂಗೀಕಾರಕ್ಕೆ ಸರ್ಕಾರ ಮುಂದಾಗಿದೆ. ಕಳೆದ ಐದು ದಿನಗಳಿಂದ ಅಹೋರಾತ್ರಿ ರೈತರು ಧರಣಿ ನಡೆಸುತ್ತಿದ್ದರೂ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಸೌಜನ್ಯಕ್ಕಾದರೂ ಬಂದು ಮಾತನಾಡಿಸಿಲ್ಲ. ಕೃಷಿ ಸಂಬಂಧಿತ ಇಲಾಖೆಗಳ ಸಚಿವರಾದ ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ನಾರಾಯಣ ಗೌಡ ಕೂಡ ಬಂದು ನಮ್ಮನ್ನು ಭೇಟಿಯಾಗಿಲ್ಲ. ಇವರೆಲ್ಲಾ ನಮ್ಮನ್ನು ಸರ್ಕಾರದಲ್ಲಿ ಪ್ರತಿನಿಧಿಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರದ ದಮನಕಾರಿ ನೀತಿ ಅನುಸರಿಸುತ್ತಿದೆ. ಸರ್ಕಾರವನ್ನು ಬಹುರಾಷ್ಟ್ರೀಯ, ಕಾರ್ಪೊರೇಟ್ ಕಂಪನಿಗಳು ಆಳುತ್ತಿವೆ ಎಂದು ಆರೋಪಿಸಿದ ಶಾಂತಕುಮಾರ್, ವಿಧಾನ ಪರಿಷತ್ ನಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಭರವಸೆ ನೀಡಿದೆ. ಒಂದು ವೇಳೆ ಅವಕಾಶ ನೀಡಿದರೆ ಈ ಪಕ್ಷಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸರ್ಕಾರ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧ ಎಂದು ಶಾಂತಕುಮಾರ್ ಹೇಳಿದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆದ್ದಾರಿಗಳನ್ನು ಬಂದ್ ಮಾಡಿ, ಸರ್ಕಾರಕ್ಕೆ ಬಿಸಿ ತೋರಿಸಿ ,ರೈತರ ಶಕ್ತಿ ಪ್ರದರ್ಶಿಸುತ್ತೇವೆ. ಅನ್ನದಾತನಿಗೆ ವಿರೋಧ ಮಾಡಿದರೆ ಅದು ದೇಶದ ಜನತೆಗೆ ದ್ರೋಹ ಬಗೆದಂತೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. 300 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ, 500 ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರತಿಭಟನಕಾರರನ್ನು ಬಂಧಿಸಲು 10ಕ್ಕೂ ಹೆಚ್ಚು ಬಿಎಂಟಿಸಿ ಬಸ್, ಮೂರು ಪೊಲೀಸ್ ವ್ಯಾನ್ ನಿಯೋಜಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com