ನಾಗಮಂಗಲ ಪೊಲೀಸರ ಮಿಂಚಿನ ಕಾರ್ಯಾಚರಣೆ: ಏಳು ಅಪಹರಣಕಾರರ ಬಂಧನ

ಬೆಂಗಳೂರಿನ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕ್ಕೆ ಇಟ್ಟು ಲಾಡ್ಜ್ ವೊಂದರಲ್ಲಿ ತಲೆ ಮರೆಸಿಕೊಂಡಿದ್ದ ೭ ಜನ ಅಪಹರಣಕಾರರನ್ನು ಬಂಧಿಸುವಲ್ಲಿ ನಾಗಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಬೆಂಗಳೂರಿನ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕ್ಕೆ ಇಟ್ಟು ಲಾಡ್ಜ್ ವೊಂದರಲ್ಲಿ ತಲೆ ಮರೆಸಿಕೊಂಡಿದ್ದ ೭ ಜನ ಅಪಹರಣಕಾರರನ್ನು ಬಂಧಿಸುವಲ್ಲಿ ನಾಗಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿಗಳಾಗಿದ್ದ ಮಹೇಶ್, ಮೋಹನ್, ನವ್ಯಂತ್, ಭರತ್, ಜೋಸೆಫ್, ರವಿಕಿರಣ್ ಹಾಗೂ ರಾಜು ಎಂಬ ಯುವಕರೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಅಪಹರಣಾಕಾರಾಗಿದ್ದಾರೆ.

ಈ ೭ ಜನರು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವನನ್ನು ಅಪಹರಿಸಿದ್ದರು. ಬಳಿಕ ಯುವಕನ ಪೋಷಕರಿಗೆ ಕರೆ ಮಾಡಿ ೩೦ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಯುವಕನ ಪೋಷಕರು ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಪೋಷಕರ ದೂರಿನ ಮೇರೆಗೆ ಮಾಹಿತಿ ಕಲೆ ಹಾಕಿದ ತಿಲಕನಗರ ಆರೋಪಿಗಳು ಕರೆ ಮಾಡಿದ ಪೋನ್ ನಂಬರ್ ಮತ್ತು ಲೋಕೇಶನ್ ಆಧಾರದ ಮೇಲೆ ಆರೋಪಿಗಳು ನಾಗಮಂಗಲದಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ರವಾನಿಸಿ ಆರೋಪಿಗಳ ಬಂಧನಕ್ಕೆ ಸ್ಥಳೀಯ ಪೊಲೀಸರ ನೆರವು ಕೋರಿದ್ದರು.

ತಕ್ಷಣವೇ ಅಲರ್ಟ್ ಆದ ನಾಗಮಂಗಲ ಪೊಲೀಸರು ಮಾಹಿತಿ ಜಾಡು ಹಿಡಿದು ದುಷ್ಕರ್ಮಿಗಳು ಎಸ್‌ಎಲ್‌ಎನ್. ಗ್ರ‍್ಯಾಂಡ್ ರೆಸಿಡೆನ್ಸಿಯಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನಂತೆ ಕೆಲವು ಅಧಿಕಾರಿಗಳು ದುಷ್ಕರ್ಮಿಗಳಿದ್ದ ಲಾಡ್ಜ್ ಗೆ ಎಂಟ್ರಿ ಕೊಟ್ಟರು. ಆರೋಪಿಗಳ ಚಲನವಲನ ಪರಿಶೀಲನೆ ನಂತರ ತಮ್ಮ ಸಿಬ್ಬಂದಿಗಳೊಂದಿಗೆ ಮಿಂಚಿನ ಕಾರ್ಯಾಚರಣೆ ಮೂಲಕ ಅಪಹರಣಕಾರರನ್ನು ಬಂಧಿಸಿ ತಿಲಕನಗರ ಪೊಲೀಸರ ವಶಕ್ಕೆ ನೀಡಿದರು.

ನಾಗಮಂಗಲ ಪಟ್ಟಣದಲ್ಲಿ ಸಿನಿಮಾದಂತೆ ನಡೆದ ಈ ಘಟನೆಗೆ ಸಾರ್ವಜನಿಕರು ಕೂಡ ಪೊಲೀಸರಿಗೆ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಪ್ರಾಣದ ಹಂಗುನ್ನು ತೊರೆದು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ನಾಗಮಂಗಲ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೂಡ ಪ್ರಶಂಸೆ ವ್ಯಕ್ತಪಡಿಸಿ ಅಭಿನಂಧಿಸಿದ್ದಾರೆ.
-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com