ಕಾಂಗ್ರೆಸ್ ಸಭಾತ್ಯಾಗದ ನಡುವೆ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ ಅಂಗೀಕಾರ

ವಿತ್ತೀಯ ಹೊಣೆಗಾರಿಕೆಯಡಿ ಸಾಲ ಮಾಡುವ ಪ್ರಮಾಣದ ಮಿತಿಯನ್ನು ಶೇ.3 ರಿಂದ ಶೇ.5ಕ್ಕೆ ಹೆಚ್ಚಳ ಮಾಡುವ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ 2020 ಅನ್ನು ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ, ಜೆಡಿಎಸ್ ಗೈರಿನ ನಡುವೆ ಅಂಗೀಕರಿಸಲಾಯಿತು.
ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು: ವಿತ್ತೀಯ ಹೊಣೆಗಾರಿಕೆಯಡಿ ಸಾಲ ಮಾಡುವ ಪ್ರಮಾಣದ ಮಿತಿಯನ್ನು ಶೇ.3 ರಿಂದ ಶೇ.5ಕ್ಕೆ ಹೆಚ್ಚಳ ಮಾಡುವ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ 2020 ಅನ್ನು ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ, ಜೆಡಿಎಸ್ ಗೈರಿನ ನಡುವೆ ಅಂಗೀಕರಿಸಲಾಯಿತು.

ವಿಧಾನ ಪರಿಷತ್ ನಲ್ಲಿ ವಿಧೇಯಕ ಮಂಡಿಸಿ ಮಾತನಾ‌ಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಆದಾಯ ಮತ್ತು ವಿತ್ತೀಯ ಕೊರತೆ ನಡುವೆ ಹೊಂದಾಣಿಕೆ ಅಗತ್ಯವಿದೆ. ಶೆ.3ಕ್ಕಿಂತ ಹೆಚ್ಚು ವಿತ್ತೀಯ ಕೊರತೆ ಇರಬಾರದು ಎಂದು ಕೇಂದ್ರ ತೀರ್ಮಾನಿಸಿತ್ತು. ಆದರೆ ಕೋವಿಡ್ ಕಾರಣದಿಂದ ಈ ಬಾರಿ ಶೇ.23 ಆದಾಯ ಕಡಿತವಾಗಿದೆ ಹಾಗಾಗಿ ಶೇ.3 ರಿಂದ ಶೇ.5 ರಷ್ಟು ಮಾಡಿಕೊಳ್ಳಬಹುಮಹುದು ಇದರಿಂದ ಹೆಚ್ಚುವರಿ ಸಾಲ ಮಾಡಿ ಆರ್ಥಿಕ ಕೊರತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ನಮಗೆ 179920 ಕೋಟಿ ರೂಪಾಯಿ ಆದಾಯ ಬರಬೇಕಿತ್ತು ಆದರೆ 114658 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿದೆ. 65262 ಕೋಟಿ ಆದಾಯ ಕಡಿತವಾಗಿದೆ, ವೇತನ ಪಾವತಿ, ಪಿಂಚಣಿ ಇತ್ಯಾದಿ ನಿರ್ವಹಣೆಗೆ 150240 ಕೋಟಿ ವೆಚ್ಚ ಬರಕಿದೆ. 87650 ಕೋಟಿ ಸ್ಕೀಂ ಗಳಿಗೆ ಇರಿಸಲಾಗಿತ್ತು. ಆದರೆ ಈಗ ವರಮಾನ ಶೂನ್ಯವಾಗಿದೆ. ಹೆಚ್ಚುವರಿ ವೆಚ್ಚವಾಗಿದೆ ಎಂದು ವಿವರಿಸಿದರು.

ರಾಜ್ಯಕ್ಕೆ 11324 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರ ಬರಬೇಕಿದೆ. ಇದನ್ನು ಕೇಂದ್ರ ಜವಾಬ್ದಾರಿ ತೆಗೆದುಕೊಂಡಿದೆ ನೀಡಲಿದೆ. ಆದರೂ ವಿತ್ತೀಯ ಕೊರತೆ ಮಿತಿಯನ್ನು ಶೇ. 5 ಕ್ಕೆ ಹೆಚ್ಚಿಸಿದರೆ ರಾಜ್ಯಕ್ಕೆ ಕಷ್ಟವಾಗಲಿದೆ. ಇಂದು ಸಾಲ ಪಡೆಯದೇ ಸರ್ಕಾರ ನಡೆಸಲು ಸಾಧ್ಯವಿಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಬಿಲ್ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ, ಕೇಂದ್ರದ ಮೇಲೆ‌ ಒತ್ತಡ ಹಾಕಲು ರಾಜ್ಯ ಸರ್ಕಾರ ವಿಫಲವಾಗಿದೆ. ಒತ್ತಡ ಹಾಕಿ ಜಿಎಸ್ ಟಿ ಪರಿಹಾರ ಪಡೆದುಕೊಳ್ಳಬೇಕು. ನಾವು ಸಂಗ್ರಹಿಸಿ ಕೊಟ್ಟ ಹಣ ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಕೇಂದ್ರ ಕೊಡದಿದ್ದರೆ ರಾಜ್ಯ ಸರ್ಕಾರ ಏನು ಮಾಡಬೇಕು. ಸಿಎಂ ಬಂದು ಉತ್ತರ ನೀಡಲಿ ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com